×
Ad

ಕ್ರೀಡಾ ಪ್ರಾಧಿಕಾರದಿಂದ ಅಸಹಕಾರ

Update: 2019-02-05 23:48 IST

ಹೊಸದಿಲ್ಲಿ, ಫೆ.5: ತಾನು ಏಶ್ಯನ್ ಗೇಮ್ಸ್ ವೇಳೆ ಗಾಯಗೊಂಡಿದ್ದಾಗ ಚಿಕಿತ್ಸೆಗೆ ಹಣಕಾಸು ನೆರವು ನೀಡುವಂತೆ ಸಲ್ಲಿಸಿದ ಮನವಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ನಿರ್ಲಕ್ಷಿಸಿದೆ ಎಂದು ಸಕ್ರಿಯ ಬಾಕ್ಸರ್ ಮನೋಜ್‌ಕುಮಾರ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಸಾಯ್ ತಳ್ಳಿ ಹಾಕಿದ್ದು, ಮನೋಜ್ ಫಿಟ್ನೆಸ್ ಸಮಸ್ಯೆಯನ್ನು ಮುಚ್ಚಿಟ್ಟಿದ್ದರು ಎಂದು ಪ್ರತ್ಯಾರೋಪ ಮಾಡಿದೆ.

ಈ ಕುರಿತು ಕೇಂದ್ರ ಕ್ರೀಡಾ ಮಂತ್ರಿ ರಾಜ್ಯವರ್ಧನ್‌ಸಿಂಗ್ ರಾಥೋಡ್‌ಗೆ ಪತ್ರ ಬರೆದಿರುವ ಮೂರು ಬಾರಿಯ ಕಾಮನ್‌ವೆಲ್ತ್ ಪದಕ ವಿಜೇತ ಮನೋಜ್ ಅವರ ಕೋಚ್ ಹಾಗೂ ಅಣ್ಣ ರಾಜೇಶ್ ರಜೌಂಡ್, ಮನೋಜ್‌ರ ತೊಡೆಸಂಧು ನೋವಿನ ಬಗ್ಗೆ ಹಲವು ಬಾರಿ ನೆನಪಿಸಿದರೂ ಸಾಯ್ ತನ್ನ ಮನವಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದ್ದಾರೆ.

‘‘ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ರಾಜಕೀಯ ಮಾಡುತ್ತಿದ್ದು, ನಾನು ತಮಗೆ(ಕ್ರೀಡಾಮಂತ್ರಿ)ಈ ಕುರಿತು ತನಿಖೆ ಕೈಗೊಂಡು ಶೀಘ್ರ ಚಿಕಿತ್ಸೆಗೆ ನೆರವು ನೀಡಬೇಕೆಂದು ಮನವಿ ಮಾಡಿಕೊಳ್ಳುವೆ’’ ಎಂದು ರಜೌಂಡ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏಶ್ಯನ್ ಗೇಮ್ಸ್ ಬಳಿಕ ಗಾಯದ ಕಾರಣದಿಂದ ಮನೋಜ್ ಯಾವುದೇ ಕ್ರೀಡಾಕೂಟದಲ್ಲಿ ಪಾಲ್ಗೊಂಡಿಲ್ಲ. ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಶಿಬಿರಾರ್ಥಿಗಳ ಪಟ್ಟಿಯಲ್ಲಿಯೂ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಮನೋಜ್ ಆರೋಪದ ಕುರಿತು ಸಾಯ್ ಅಧಿಕಾರಿಯೊಬ್ಬರು ಪಿಟಿಐಗೆ ಪ್ರತಿಕ್ರಿಯಿಸಿದ್ದು, ಮನೋಜ್‌ರಿಗೆ ಹಣಕಾಸು ನೆರವು ನೀಡಲಾಗಿದೆ. ಆದರೆ ತನ್ನ ಗಾಯದ ಕುರಿತಾಗಿ ಅವರು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News