ಟಿ-20 ಕ್ರಿಕೆಟ್‌ನಲ್ಲಿ ರೋಹಿತ್ ಗರಿಷ್ಠ ಸ್ಕೋರರ್
ಆಕ್ಲಂಡ್,ಫೆ.8: ನ್ಯೂಝಿಲೆಂಡ್ ವಿರುದ್ಧ ಈಡನ್‌ಪಾರ್ಕ್ ನಲ್ಲಿ ಶುಕ್ರವಾರ ನಡೆದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿ ದಾಖಲೆ ನಿರ್ಮಿಸಿದರು.
ಸ್ಪಿನ್ನರ್ ಐಶ್ ಸೋಧಿ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರೋಹಿತ್ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು. ಒಟ್ಟು 2,272 ರನ್ ತಲುಪಿದ ತಕ್ಷಣ ನ್ಯೂಝಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ತನ್ನ 92ನೇ ಟಿ-20 ಪಂದ್ಯವನ್ನು ಆಡಿದ ರೋಹಿತ್ 52 ರನ್ ಗಳಿಸಿ ಔಟಾದರು. ಒಟ್ಟು 92 ಪಂದ್ಯಗಳನ್ನು ಆಡಿರುವ ರೋಹಿತ್ 32.68ರ ಸರಾಸರಿಯಲ್ಲಿ 138.41ರ ಸ್ಟ್ರೈಕ್‌ರೇಟ್‌ನಲ್ಲಿ 2,288 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 16 ಅರ್ಧಶತಕಗಳಿವೆ.
ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 49.25ರ ಸರಾಸರಿಯಲ್ಲಿ 65 ಪಂದ್ಯಗಳಲ್ಲಿ 2,167 ರನ್ ಗಳಿಸಿದ್ದಾರೆ.
ಇದೇ ವೇಳೆ ಸ್ಕಾಟ್ ಕಗ್ಲೆಜಿನ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರೋಹಿತ್ 100ನೇ ಸಿಕ್ಸರ್ ಪೂರೈಸಿದರು. ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ನ್ಯೂಝಿಲೆಂಡ್‌ನ ಮಾರ್ಟಿನ್ ಗಪ್ಟಿಲ್( ಇಬ್ಬರೂ 103 ಸಿಕ್ಸರ್ ಸಿಡಿಸಿದ್ದಾರೆ)ಬಳಿಕ ಗರಿಷ್ಠ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ರೋಹಿತ್ ಮೂರನೇ ಸ್ಥಾನ ಪಡೆದಿದ್ದಾರೆ.
ಭಾರತೀಯರ ಪೈಕಿ ರೋಹಿತ್ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಯುವರಾಜ್ ಸಿಂಗ್(74 ಸಿಕ್ಸರ್), ಸುರೇಶ್ ರೈನಾ(58) ಹಾಗೂ ವಿರಾಟ್ ಕೊಹ್ಲಿ(48) ಆ ಬಳಿಕದ ಸ್ಥಾನದಲ್ಲಿದ್ದಾರೆ.