ಟಿ-20ಯಲ್ಲಿ 300 ಪಂದ್ಯ ಪೂರೈಸಿದ ಭಾರತದ ಮೊದಲ ಕ್ರಿಕೆಟಿಗ ಧೋನಿ

Update: 2019-02-10 10:18 GMT

 ಹೊಸದಿಲ್ಲಿ, ಫೆ.10: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂಝಿಲೆಂಡ್ ವಿರುದ್ಧ ರವಿವಾರ ಹ್ಯಾಮಿಲ್ಟನ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ವೇಳೆ ತನ್ನ ಯಶಸ್ವಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ಧೋನಿ ಟಿ-20 ಮಾದರಿಯ ಕ್ರಿಕೆಟ್ ಪಂದ್ಯದಲ್ಲಿ 300 ಪಂದ್ಯಗಳನ್ನು ಆಡಿದ ಭಾರತದ ಪ್ರಥಮ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಧೋನಿ 300 ಹಾಗೂ ಅದಕ್ಕಿಂತ ಹೆಚ್ಚು ಟಿ-20 ಪಂದ್ಯಗಳನ್ನು ಆಡಿದ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ 12ನೇ ಸ್ಥಾನ ಹಂಚಿಕೊಂಡಿದ್ದಾರೆ. ಇದೀಗ 300ನೇ ಪಂದ್ಯ ಆಡಿದ ಧೋನಿ ಇಂಗ್ಲೆಂಡ್‌ನ ಲೂಕ್ ವೈಟ್‌ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ಧೋನಿ 300 ಟಿ-20 ಪಂದ್ಯಗಳಲ್ಲಿ 38.57ರ ಸರಾಸರಿಯಲ್ಲಿ 24 ಅರ್ಧಶತಕಗಳ ಸಹಿತ 6,134 ರನ್ ಗಳಿಸಿದ್ದಾರೆ. ಧೋನಿಗೆ ಈ ತನಕ ಟಿ-20ಯಲ್ಲಿ ಶತಕವನ್ನು ಗಳಿಸಲು ಸಾಧ್ಯವಾಗಿಲ್ಲ.

ಇಂದಿನ ಪಂದ್ಯ ಸಹಿತ ಒಟ್ಟು 298 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಗರಿಷ್ಠ ಟಿ-20 ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಕ್ರಿಕೆಟಿಗನಾಗಿದ್ದಾರೆ.

 ಒಟ್ಟು 446 ಟಿ-20 ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಿರೊನ್ ಪೊಲಾರ್ಡ್ ಸಾರ್ವಕಾಲಿಕ ಗರಿಷ್ಠ ಟಿ-20 ಪಂದ್ಯ ಆಡಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪೊಲಾರ್ಡ್ 29.97ರ ಸರಾಸರಿಯಲ್ಲಿ ಒಂದು ಶತಕ ಹಾಗೂ 43 ಅರ್ಧಶತಕಗಳನ್ನೊಳಗೊಂಡ 8,753 ರನ್ ಗಳಿಸಿದ್ದಾರೆ.

ಗರಿಷ್ಠ ಟಿ-20 ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರು

300 ಪಂದ್ಯಗಳು-ಎಂ.ಎಸ್. ಧೋನಿ

298-ರೋಹಿತ್ ಶರ್ಮಾ

296-ಸುರೇಶ್ ರೈನಾ

260-ದಿನೇಶ್ ಕಾರ್ತಿಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News