ದಿಲ್ಲಿ ಆಟಗಾರ ಅನುಜ್‌ಗೆ ಆಜೀವ ನಿಷೇಧಕ್ಕೆ ಸಿದ್ಧತೆ: ಡಿಡಿಸಿಎ

Update: 2019-02-12 18:00 GMT

ಹೊಸದಿಲ್ಲಿ, ಫೆ.12: ದಿಲ್ಲಿಯ 23 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ತನ್ನನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಭಾರತದ ಮಾಜಿ ವೇಗದ ಬೌಲರ್ ಅಮಿತ್ ಭಂಡಾರಿ ಮೇಲೆ ದೈಹಿಕ ಹಲ್ಲೆ ನಡೆಸಿರುವ ಅಂಡರ್-23 ಕ್ರಿಕೆಟಿಗ ಅನುಜ್ ದೆಧಾಗೆ ಆಜೀವ ನಿಷೇಧ ಹೇರಲು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಎಲ್ಲ ಸಿದ್ಧತೆ ನಡೆಸಿದೆ.

ಹಿರಿಯ ಆಟಗಾರರ ಆಯ್ಕೆ ಸಮಿತಿ ಅಧ್ಯಕ್ಷ ಭಂಡಾರಿ ಸೋಮವಾರ ಸೈಂಟ್ ಸ್ಟೀಫನ್ಸ್ ಮೈದಾನದಲ್ಲಿ ಸಯ್ಯದ್ ಮುಶ್ತಾಕ್ ಅಲಿ ಟ್ರೋಫಿಗೆ ತಯಾರಾಗಲು ಅಭ್ಯಾಸ ಪಂದ್ಯವನ್ನು ಆಡುತ್ತಿದ್ದ ದಿಲ್ಲಿಯ ಹಿರಿಯರ ತಂಡದ ಅಭ್ಯಾಸ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಹಾಕಿ ಸ್ಟಿಕ್ಸ್, ಕ್ರಿಕೆಟ್ ಬ್ಯಾಟ್‌ಗಳು ಹಾಗೂ ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡು 15 ಗೂಂಡಾಗಳೊಂದಿಗೆ ಬಂದ ಅನುಜ್, ಭಂಡಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಭಂಡಾರಿ ಅವರ ಹಣೆ ಹಾಗೂ ದೇಹದ ಇತರ ಭಾಗಕ್ಕೆ ಗಾಯವಾಗಿದೆ. ಹಲ್ಲೆ ನಡೆದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದಿಲ್ಲಿ ಪೊಲೀಸರು ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಕ್ರಿಕೆಟಿಗ ಅನುಜ್‌ನನ್ನು ಬಂಧಿಸಿದ್ದು, ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

“ಶಿಕ್ಷೆಯ ಪ್ರಮಾಣ ನಿರ್ಧರಿಸಲು ಬುಧವಾರ ಸಭೆ ನಡೆಯಲಿದೆ. ನಾನು ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರ ಸಲಹೆಗಳನ್ನು ಒಪ್ಪುತ್ತೇನೆ. ಅನುಜ್‌ಗೆ ಆಜೀವ ನಿಷೇಧ ಹೊರತು ಬೇರೆ ಆಯ್ಕೆಯೇ ಇಲ್ಲ. ನಿರ್ದಿಷ್ಟ ಆಟಗಾರರನ್ನು ಆಯ್ಕೆ ಮಾಡಬೇಕೆಂದು ಆಯ್ಕೆಗಾರರಿಗೆ ಒತ್ತಡ ಹೇರುತ್ತಿರುವುದು ಸೇರಿದಂತೆ ಎಲ್ಲ ದೂರುಗಳ ತನಿಖೆ ನಡೆಸಲು ನಿರ್ಧರಿಸಲಾಗಿದೆ” ಎಂದು ಶರ್ಮಾ ತಿಳಿಸಿದರು.

“ಎಲ್ಲ ವಯೋಮಿತಿಯ ಆಯ್ಕೆಗಾರರು ಹಾಗೂ ಮಾಜಿ ಕ್ರಿಕೆಟಿಗರಿಗೆ ಸಭೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ. ಆಯ್ಕೆ ವಿಷಯಕ್ಕೆ ಸಂಬಂಸಿ ಚರ್ಚಿಸುವ ಅಗತ್ಯವಿದೆ. ದೊಡ್ಡ ಸಂಚಿನ ಆಯಾಮ ಬಹಿರಂಗವಾಗುವ ಅಗತ್ಯವಿದೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಆಯ್ಕೆಗಾರರುನ್ ಸ್ವೀಕರಿಸಿ ನಿರ್ದಿಷ್ಟ ಆಟಗಾರರನ್ನು ಆಯ್ಕೆ ಮಾಡುವ ಕುರಿತ ಎಲ್ಲ ದೂರುಗಳನ್ನು ತನಿಖೆ ನಡೆಸಲು ನಿರ್ಧರಿಸಿದ್ದೇವೆ. ಈ ವರ್ಷ ಇಂತಹ ಹಲವು ದೂರುಗಳು ಬಂದಿವೆ. ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸಲು ಸೂಚನೆ ನೀಡುವುದಾಗಿ ದಿಲ್ಲಿ ಗವರ್ನರ್ ಅನಿಲ್ ಬೈಜಾಲ್ ನನಗೆ ಭರವಸೆ ನೀಡಿದ್ದಾರೆ” ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News