ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್: ಸ್ಮತಿ, ಜೆಮಿಮಾಗೆ 4 ಸ್ಥಾನ ಭಡ್ತಿ
ದುಬೈ, ಫೆ.12: ಭಾರತದ ಬ್ಯಾಟ್ಸ್‌ವುಮನ್ ಜೆಮಿಮಾ ರೊಡ್ರಿಗಸ್ ಹಾಗೂ ಸ್ಮತಿ ಮಂಧಾನಾ ಮಂಗಳವಾರ ಬಿಡುಗಡೆಯಾದ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಭಡ್ತಿ ಪಡೆದು ಕ್ರಮವಾಗಿ ಎರಡನೇ ಹಾಗೂ ಆರನೇ ಸ್ಥಾನಕ್ಕೇರಿದ್ದಾರೆ.
ಭಾರತ ತಂಡ ನ್ಯೂಝಿಲೆಂಡ್ ಸರಣಿಯನ್ನು 0-3 ಅಂತರದಿಂದ ಸೋತ ಹೊರತಾಗಿಯೂ ಆಟಗಾರ್ತಿಯರು ಟಿ-20 ರ್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ರೊಡ್ರಿಗಸ್ ಒಟ್ಟು 132 ರನ್ ಗಳಿಸಿದ್ದು, ದ್ವಿತೀಯ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕಳೆದ ವಾರ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದ ಮಂಧಾನಾ ನಾಲ್ಕು ಸ್ಥಾನ ಮೇಲಕ್ಕೇರಿದ್ದಾರೆ. ಮಂಧಾನಾ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ 180 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
ಎಡಗೈ ಆಟಗಾರ್ತಿ ಮಂಧಾನಾ ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ 86 ರನ್ ಸಹಿತ ಒಟ್ಟು 2 ಅರ್ಧಶತಕ ಗಳಿಸಿದ್ದಾರೆ.
ಸ್ಪಿನ್ನರ್‌ಗಳಾದ ರಾಧಾ ಯಾದವ್ ಸರಣಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದು 18 ಸ್ಥಾನ ಮೇಲಕ್ಕೇರಿ 10ನೇ ಸ್ಥಾನ ತಲುಪಿದರು. ದೀಪ್ತಿ ಶರ್ಮಾ 5 ಸ್ಥಾನ ಮೇಲಕ್ಕೇರಿ 14ನೇ ಸ್ಥಾನ ತಲುಪಿದ್ದಾರೆ.
ನ್ಯೂಝಿಲೆಂಡ್ ತಂಡದಲ್ಲಿ ಸೋಫಿ ಡಿವೈನ್ 11ನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿದ್ದಾರೆ. ಡಿವೈನ್ ಸರಣಿಯಲ್ಲಿ ಒಟ್ಟು 153 ರನ್ ಗಳಿಸಿದ್ದರು. ಇದರಲ್ಲಿ ಕೊನೆಯ ಪಂದ್ಯದಲ್ಲಿ ಗಳಿಸಿದ ಮ್ಯಾಚ್ ವಿನ್ನಿಂಗ್ 72 ರನ್ ಕೂಡ ಸೇರಿದೆ. ನಾಯಕಿ ಆ್ಯಮಿ ಸ್ಯಾಟ್ಟರ್‌ವೇಟ್ 23ನೇ ಸ್ಥಾನದಿಂದ 17ನೇ ಸ್ಥಾನಕ್ಕೇರಿದ್ದಾರೆ. ಬೌಲರ್‌ಗಳ ಪೈಕಿ ಲಿಯಾ ತಹುಹು ಐದು ಸ್ಥಾನ ಭಡ್ತಿ ಪಡೆದು 11ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ವಿಂಡೀಸ್‌ನ ಡಿಯಾಂಡ್ರಾ ಡಾಟ್ಟಿನ್ ಅಗ್ರ ಸ್ಥಾನದಲ್ಲಿದ್ದಾರೆ. ಟೀಮ್ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡನ್ನು ಹಿಂದಿಕ್ಕಿದ ನ್ಯೂಝಿಲೆಂಡ್ ದ್ವಿತೀಯ ಸ್ಥಾನ ತಲುಪಿದೆ. ಆಸ್ಟ್ರೇಲಿಯ ನಂ.1 ಸ್ಥಾನ ಕಾಯ್ದುಕೊಂಡಿದೆ. ವಿಂಡೀಸ್ ಹಾಗೂ ಭಾರತ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿವೆ.