ಫೆ.15ಕ್ಕೆ ಟೀಮ್ ಇಂಡಿಯಾ ಆಯ್ಕೆ

Update: 2019-02-12 18:06 GMT

ಹೊಸದಿಲ್ಲಿ,ಫೆ.12: ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯುವ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯು ಮುಂಬೈನಲ್ಲಿ ಶುಕ್ರವಾರ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಲಿದೆ.

ಭಾರತೀಯ ಕ್ರಿಕೆಟ್ ತಂಡ ಆಸೀಸ್ ವಿರುದ್ಧ 2 ಟಿ-20 ಹಾಗೂ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದು ಇಂಗ್ಲೆಂಡ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಿಂತ ಮೊದಲು ಭಾರತದ ಆಟಗಾರರು ಆಡಲಿರುವ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯಗಳ ಸರಣಿಯಾಗಿದೆ.

ವಿಶ್ವಕಪ್‌ಗಿಂತ ಮೊದಲು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಬಯಸಿರುವ ಆಯ್ಕೆ ಸಮಿತಿ, ತಂಡದಲ್ಲಿ ಸರಿಯಾದ ಸಮತೋಲನ ಕಾಯ್ದುಕೊಳ್ಳುವತ್ತ ಚಿತ್ತವಿರಿಸಿದೆ. ವಿಶ್ವಕಪ್‌ಗಿಂತ ಮೊದಲು ನಡೆಯುವ ಕೊನೆಯ ಸರಣಿ ಇದಾಗಿರುವ ಕಾರಣ ಆಸ್ಟ್ರೇಲಿಯ ಮೇಲುಗೈ ಸಾಧಿಸದಂತೆ ತಂಡವನ್ನು ಆಯ್ಕೆ ಮಾಡುವುದು ಆಯ್ಕೆಗಾರರ ಮುಂದಿದೆ.

ಹಿರಿಯ ಆಟಗಾರರ ಮೇಲಿನ ಕೆಲಸದ ಒತ್ತಡ ಸಭೆಯಲ್ಲಿ ಚರ್ಚೆಯ ಮುಖ್ಯ ವಿಷಯವಾಗಲಿದೆ. ಖಾಯಂ ನಾಯಕ ವಿರಾಟ್ ಕೊಹ್ಲಿಗೆ ನ್ಯೂಝಿಲೆಂಡ್ ಸರಣಿ ಅಂತ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ರೋಹಿತ್ ಶರ್ಮಾ ಕೂಡ ವಿರಾಮ ಪಡೆಯಲು ಬಯಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿಕೆಟ್‌ಕೀಪರ್ ರಿಷಭ್ ಪಂತ್ ಹೆಚ್ಚು ಪಂದ್ಯಗಳನ್ನು ಆಡುವುದು ಖಚಿತ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅಜಿಂಕ್ಯ ರಹಾನೆ ಕೊನೆಯ ಅವಕಾಶ ಪಡೆಯುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ. ಬೌಲಿಂಗ್ ವಿಭಾಗದಲ್ಲೂ ಕೂಡ ಜಸ್‌ಪ್ರಿತ್ ಬುಮ್ರಾ ತಂಡಕ್ಕೆ ವಾಪಸಾಗುವುದು ನಿಶ್ಚಿತ. ಬುಮ್ರಾ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ.

ಐಪಿಎಲ್ ವೇಳೆ ಆಟಗಾರರ ಪ್ರದರ್ಶನವನ್ನು ಗಮನಿಸಲಾಗುವುದು ಎಂದು ಮುಖ್ಯ ಕೋಚ್ ರವಿ ಶಾಸ್ತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News