ಇಂಗ್ಲೆಂಡ್ ಗೆ ಭಾರೀ ಮುನ್ನಡೆ

Update: 2019-02-12 18:11 GMT

ಸೈಂಟ್ ಲೂಸಿಯಾ, ಫೆ.12: ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ನಾಯಕ ಜೋ ರೂಟ್ ಸಿಡಿಸಿದ 16ನೇ ಶತಕದ ಸಹಾಯದಿಂದ ಮೂರನೇ ದಿನದಾಟದಂತ್ಯಕ್ಕೆ 448 ರನ್ ಮುನ್ನಡೆ ಪಡೆದಿದೆ.

ಇಲ್ಲಿನ ಡರೆನ್ ಸಮ್ಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ 3ನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 325 ರನ್ ಕಲೆ ಹಾಕಿದೆ. 209 ಎಸೆತಗಳನ್ನು ಎದುರಿಸಿದ ರೂಟ್ 9 ಬೌಂಡರಿಗಳ ನೆರವಿನಿಂದ ಔಟಾಗದೆ 111 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಒಟ್ಟು 448 ರನ್ ಮುನ್ನಡೆಯಲ್ಲಿದೆ. ಇನ್ನು ಎರಡು ದಿನಗಳ ಆಟ ಬಾಕಿಯಿದ್ದು ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್‌ಗೆ ಹೆಚ್ಚಿನ ಅವಕಾಶವಿದೆ.

3 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಇಂಗ್ಲೆಂಡ್ ಈಗಾಗಲೆ ವಿಸ್ಡನ್ ಟ್ರೋಫಿಯನ್ನು ವಿಂಡೀಸ್‌ಗೆ ಒಪ್ಪಿಸಿದೆ.

ಕೀಮೊ ಪಾಲ್ ಗಾಯಗೊಂಡಿರುವ ಕಾರಣ ವಿಂಡೀಸ್ ಬೌಲಿಂಗ್ ವಿಭಾಗ ಬೌಲರ್ ಕೊರತೆ ಅನುಭವಿಸಿತು. ಇಂಗ್ಲೆಂಡ್ ಇದರ ಸಂಪೂರ್ಣ ಲಾಭ ಪಡೆಯಿತು. ರೂಟ್ ಟೆಸ್ಟ್ ಸರಣಿಯ ಐದು ಇನಿಂಗ್ಸ್ ಗಳಲ್ಲಿ ಕೇವಲ 55 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು. ಇದೀಗ ಅವರು ಹಳೆಯ ಲಯಕ್ಕೆ ಮರಳಿದ್ದಾರೆ.

ಜೋ ಡೆನ್ಲಿ(69) ಅವರೊಂದಿಗೆ 3ನೇ ವಿಕೆಟ್‌ಗೆ74, ಜೋಸ್ ಬಟ್ಲರ್(56) ಅವರೊಂದಿಗೆ 4ನೇ ವಿಕೆಟ್‌ಗೆ 107 ಹಾಗೂ ಬೆನ್ ಸ್ಟೋಕ್ಸ್(ಔಟಾಗದೆ 29) ಅವರೊಂದಿಗೆ 5ನೇ ವಿಕೆಟ್‌ಗೆ 71 ರನ್ ಸಹಿತ ಸತತ ಜೊತೆಯಾಟ ನಡೆಸಿದ ರೂಟ್ ಇಂಗ್ಲೆಂಡ್ ಇನಿಂಗ್ಸ್‌ನ್ನು ಆಳಕ್ಕೆ ಕೊಂಡೊಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News