ಕೋಚ್ ಬಜಿನ್‌ರಿಂದ ಬೇರ್ಪಟ್ಟ ಒಸಾಕಾ

Update: 2019-02-12 18:12 GMT

ಟೋಕಿಯೊ,ಫೆ.12: ಆಸ್ಟ್ರೇಲಿಯನ್ ಓಪನ್‌ನಲ್ಲಿ ಸತತ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ 17 ದಿನಗಳ ಬಳಿಕ ವಿಶ್ವದ ನಂ.1 ಟೆನಿಸ್ ಆಟಗಾರ್ತಿ ನಯೊಮಿ ಒಸಾಕಾ ತನ್ನ ಕೋಚ್ ಸಾಸ್ಚಾ ಬಜಿನ್‌ರಿಂದ ಬೇರ್ಪಟ್ಟಿದ್ದಾರೆ.

‘‘ನಾನು ಇನ್ನು ಮುಂದೆ ಸಾಸ್ಚಾರೊಂದಿಗೆ ಕೆಲಸ ಮಾಡುವುದಿಲ್ಲ. ಅವರು ಮಾಡಿರುವ ಕೆಲಸಕ್ಕೆ ಧನ್ಯವಾದ ಹಾಗೂ ಅವರ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸುವೆ’’ ಎಂದು 21ರ ಹರೆಯದ ಜಪಾನ್ ಆಟಗಾರ್ತಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಜಿನ್, ‘‘ಧನ್ಯವಾದ ನಯೊಮಿ. ನಾನು ನಿನಗೆ ಒಳ್ಳೆಯದಲ್ಲದೇ ಬೇರೇನೂ ಬಯಸುವುದಿಲ್ಲ. ಅದೊಂದು ಉತ್ತಮ ಪ್ರಯಾಣವಾಗಿತ್ತು. ಈ ಪ್ರಯಾಣದಲ್ಲಿ ನನ್ನ ಕರೆದುಕೊಂಡುಹೋಗಿದ್ದಕ್ಕೆ ಧನ್ಯವಾದ’’ ಎಂದಿದ್ದಾರೆ.ಒಸಾಕಾ ಜ.26ರಂದು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಝೆಕ್‌ನ ಪೆಟ್ರಾ ಕ್ವಿಟೋವಾರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು. ವಿಶ್ವದ ನಂ.1 ಪಟ್ಟಕ್ಕೇರಿದ ಏಶ್ಯದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಕಳೆದೊಂದು ವರ್ಷದಿಂದ ಜರ್ಮನಿಯ ಬಜಿನ್‌ರೊಂದಿಗೆ ಕೆಲಸ ಮಾಡುತ್ತಿದ್ದ ಒಸಾಕಾ ಅವರ ಅಚ್ಚರಿಯ ನಿರ್ಧಾರಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಆಸ್ಟ್ರೇಲಿಯನ್ ಓಪನ್ ವೇಳೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯದಲ್ಲಿ 10 ನಿಮಿಷ ಕೋಚ್‌ರೊಂದಿಗೆ ಅಭ್ಯಾಸ ನಡೆಸಿದ್ದ ಅವರು ಕೆಲವೊಮ್ಮೆ ಕೋಚ್‌ರಿಲ್ಲದೇ ಅಭ್ಯಾಸ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News