ವೆಸ್ಟ್ ಇಂಡೀಸ್ ಮಡಿಲಿಗೆ ವಿಸ್ಡನ್ ಟ್ರೋಫಿ

Update: 2019-02-13 18:00 GMT

ಸೈಂಟ್‌ಲೂಸಿಯಾ, ಫೆ.13: ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಇಂಗ್ಲೆಂಡ್ ತಂಡ ತನ್ನ ನಿರಾಶಾದಾಯಕ ಟೆಸ್ಟ್ ಸರಣಿಯನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ. ಸರಣಿಯ ಮೊದಲೆರಡು ಪಂದ್ಯಗಳನ್ನು ಜಯಿಸಿದ್ದ ವಿಂಡೀಸ್ ತಂಡ ವಿಸ್ಡನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಮಂಗಳವಾರ ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನೂ ಒಂದು ದಿನ ಬಾಕಿ ಇರುವಾಗಲೇ 232 ರನ್ ಗಳಿಂದ ಜಯ ದಾಖಲಿಸಿದೆ.

ಗೆಲ್ಲಲು 485 ರನ್ ಕಠಿಣ ಸವಾಲು ಪಡೆದಿದ್ದ ವಿಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 252 ರನ್‌ಗೆ ಆಲೌಟಾಯಿತು.

ಕಾಲುನೋವಿನಿಂದಾಗಿ ಬೌಲಿಂಗ್ ಮಾಡದೇ ಉಳಿದಿದ್ದ ಕೀಮೊ ಪಾಲ್ ಕೊನೆಯ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗಿಳಿದರು. ರಾಸ್ಟನ್ ಚೇಸ್‌ಗೆ ಐದನೇ ಟೆಸ್ಟ್ ಶತಕ ಪೂರೈಸಲು ನೆರವಾದರು.

ಶಾನೊನ್ ಗ್ಯಾಬ್ರಿಯಲ್ ಔಟಾದಾಗ ಚೇಸ್ 97 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಯುವ ಆಲ್‌ರೌಂಡರ್ ಪಾಲ್ ಸಹ ಆಟಗಾರ ಚೇಸ್ ಶತಕ ಪೂರೈಸಲು ಸಾಥ್ ನೀಡಿದರು. ಚೇಸ್ 191 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಔಟಾಗದೆ 102 ರನ್ ಗಳಿಸಿದರು.

ಲಂಚ್ ವಿರಾಮಕ್ಕೆ ಮೊದಲೇ ವಿಂಡೀಸ್‌ನ ಅಗ್ರ ಸರದಿಯನ್ನು ಭೇದಿಸಿದ ಜೇಮ್ಸ್ ಆ್ಯಂಡರ್ಸನ್(3-27) ಇಂಗ್ಲೆಂಡ್‌ಗೆ ಮೇಲುಗೈ ಒದಗಿಸಿದರು. ಸ್ಪಿನ್ನರ್ ಮೊಯಿನ್ ಅಲಿ(3-99) ಮೂರು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಮಾರ್ಕ್‌ವುಡ್ ವಿಂಡೀಸ್‌ನ ಪ್ರಮುಖ ಆಟಗಾರ ಶೈ ಹೋಪ್ ವಿಕೆಟ್ ಕಬಳಿಸಿದರು. ಪಂದ್ಯದಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದ ಮಾರ್ಕ್‌ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲು ಸಹಿತ ಸರಣಿಯಲ್ಲಿ ಒಟ್ಟು 18 ವಿಕೆಟ್ ಪಡೆದ ವಿಂಡೀಸ್‌ನ ಕೆಮಾರ್ ರೋಚ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News