ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್: ಭಾರತದ ಶಟ್ಲರ್‌ಗಳಿಗೆ ಕಠಿಣ ಸವಾಲು

Update: 2019-02-13 18:07 GMT

ಬರ್ಮಿಂಗ್‌ಹ್ಯಾಮ್,ಫೆ.13: ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಸಹಿತ ಭಾರತೀಯ ಶಟ್ಲರ್‌ಗಳು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಕಠಿಣ ಡ್ರಾನಲ್ಲಿದ್ದಾರೆ. ಭಾರತ ಕಳೆದ 18 ವರ್ಷಗಳಿಂದ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿಲ್ಲ.

ಕಳೆದ ವರ್ಷ ಇದೇ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆೆಳ್ಳಿ ಪದಕ ವಿಜೇತೆ ಸಿಂಧು ದಕ್ಷಿಣ ಆಫ್ರಿಕದ ಸಂಗ್ ಜಿ ಹಿಯುನ್, ಇಂಡೋನೇಶ್ಯದ ಮಾಸ್ಟರ್ಸ್‌ ಚಾಂಪಿಯನ್ ಸೈನಾ ನೆಹ್ವಾಲ್ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೌರ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ವರ್ಲ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಾ.6 ರಿಂದ ಆರಂಭವಾಗಲಿದೆ.

ಸಿಂಧು ಹಾಗೂ ಸೈನಾ ಸದ್ಯ ಸೀನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿದ್ದಾರೆ. ಈ ಟೂರ್ನಿ ಮುಗಿದ ತಕ್ಷಣ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲು ಇಲ್ಲಿಗೆ ಬರಲಿದ್ದಾರೆ.

ಸಿಂಧುಗೆ ಮೊದಲ ಸುತ್ತಿನಲ್ಲಿ ಹಿಯುನ್ ಸವಾಲು ಎದುರಾಗಿದೆ. ಹಿಯುನ್ ಕಳೆದ ವರ್ಷ ಹಾಂಕಾಂಗ್ ಓಪನ್‌ನಲ್ಲಿ ಸಿಂಧುರನ್ನು ಸೋಲಿಸಿದ್ದರು. ಸಿಂಧು ಒಂದು ವೇಳೆ ಹಿಯನ್‌ರನ್ನು ಸೋಲಿಸಿದರೆ ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಚೆನ್ ಯುಫಿ ಅವರನ್ನು ಎದುರಿಸಬಹುದು.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ಆಲ್ ಇಂಗ್ಲೆಂಡ್‌ನಲ್ಲಿ 2015ರಲ್ಲಿ ಫೈನಲ್‌ಗೆತಲುಪಿದ್ದರು. ಮಲೇಶ್ಯಾ ಮಾಸ್ಟರ್ಸ್‌ನಲ್ಲಿ ಸೆಮಿ ಫೈನಲ್ ಹಾಗೂ ಇಂಡೋನೇಶ್ಯದಲ್ಲಿ ಪ್ರಶಸ್ತಿ ಜಯಿಸಿರುವ ಸೈನಾ ಈ ಋತುವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ಕ್ವಾರ್ಟರ್ ಫೈನಲ್‌ಗೆ ತಲುಪಿದರೆ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಝು ಯಿಂಗ್‌ರನ್ನು ಎದುರಿಸುವ ಸಾಧ್ಯತೆಯಿದೆ. ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿಯ ಫೈನಲ್‌ನಲ್ಲಿ ಮಂಡಿನೋವಿಗೆ ಒಳಗಾಗಿರುವ ಮೂರು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಸೈನಾ ಹಾಗೂ ಸಿಂಧುಗೆ ಉತ್ತಮ ಅವಕಾಶವಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಝ್‌ರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ನಂ.1 ಆಟಗಾರ ಕೆಂಟೊ ಮೊಮೊಟಾರನ್ನು ಎದುರಿಸುವ ಸಾಧ್ಯತೆಯಿದೆ. ಏಳನೇ ಶ್ರೇಯಾಂಕದ ಶ್ರೀಕಾಂತ್ ಕಳೆದ ಋತುವಿನಲ್ಲಿ ಐದು ಬಾರಿ ಮೊಮೊಟಾಗೆ ಸೋತಿದ್ದರು.

ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಸಮೀರ್ ವರ್ಮಾ ಡೆನ್ಮಾರ್ಕ್ ನ ಮಜಿ ವಿಶ್ವದ ನಂ.1 ವಿಕ್ಟರ್ ಅಕ್ಸೆಲ್‌ಸನ್‌ರನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ.

ಬಿ.ಸಾಯಿ ಪ್ರಣೀತ್ ಹಾಗೂ ಎಚ್‌ಎಸ್ ಪ್ರಣಯ್ ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಇಬ್ಬರಲ್ಲಿ ಜಯ ಸಾಧಿಸುವವರು ಇಂಡೋನೇಶ್ಯದ ಅಂಥೋನಿ ಗಿಂಟಿಂಗ್‌ರನ್ನು ಎದುರಿಸುವ ನಿರೀಕ್ಷೆಯಿದೆ.

ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಏಳನೇ ಶ್ರೇಯಾಂಕದ ಜಪಾನ್ ಜೋಡಿ ಶಿಹೊ ಟನಕಾ ಹಾಗೂ ಕೊಹರು ಯೊನೆಮೊಟೊರನ್ನು ಎದುರಿಸಲಿದ್ದಾರೆ. ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ಎಸ್.ರಾಮ್ ರಶ್ಯದ ಎಕಟೆರಿನಾ ಬೊಲೊಟೊವಾ ಹಾಗೂ ಅಲಿನಾ ಡಾವ್ಲೆಟೊವಾರನ್ನು ಎದುರಿಸುವರು.

ಪುರುಷರ ಡಬಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಮೊದಲ ಸುತ್ತಿನಲ್ಲಿ ಚೀನಾದ ಕ್ಸುಯಾನಿ ಹಾಗೂ ರೆನ್ ಕ್ಸಿಯಾಂಗ್‌ಯುರನ್ನು ಎದುರಿಸಲಿದ್ದಾರೆ. ಭಾರತ ಬ್ಯಾಡ್ಮಿಂಟನ್ ತಂಡದ ಹಾಲಿ ಕೋಚ್ ಪುಲ್ಲೆಲ ಗೋಪಿಚಂದ್ 2001ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಭಾರತಕ್ಕೆ ಈ ಟೂರ್ನಿಯಲ್ಲಿ ಪ್ರಶಸ್ತಿ ಲಭಿಸಿಲ್ಲ. ಪ್ರಕಾಶ್ ಪಡುಕೋಣೆ 1980ರಲ್ಲಿ ಮೊದಲ ಬಾರಿ ಭಾರತಕ್ಕೆ ಈ ಪ್ರಶಸ್ತಿ ಗೆದ್ದುಕೊಟ್ಟಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News