ಆಡಲು ನಿರಾಕರಿಸಿದ ಸೈನಾ, ಪಂದ್ಯ ಸಮಯ ಮರು ನಿಗದಿ

Update: 2019-02-14 18:06 GMT

ಗುವಾಹಟಿ, ಫೆ.14: ಸ್ಟೇಡಿಯಂನಲ್ಲಿ ‘‘ಕಳಪೆ ಆಡುವ ಅಂಗಣ’’ ರಚಿಸಲಾಗಿದೆ ಎಂದು ದೂರಿ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಸಿಂಗಲ್ಸ್ ಪಂದ್ಯವನ್ನು ಆಡಲು ನಿರಾಕರಿಸಿದ ಕಾರಣ ಸೀನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ವಿವಾದವೊಂದು ಸೃಷ್ಟಿಯಾಗಿದೆ.

ಸಮೀರ್ ವರ್ಮಾ ಗುರುವಾರ ಪುರುಷರ ಸಿಂಗಲ್ಸ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಸೈನಾ ಬ್ಯಾಡ್ಮಿಂಟನ್ ಅಂಗಣಕ್ಕೆ ಇಳಿದರು.

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಶೃತಿ ಮುಂಡಾಡರೊಂದಿಗೆ ಆಡಬೇಕಾಗಿದ್ದ ಸೈನಾ ಬ್ಯಾಡ್ಮಿಂಟನ್ ಅಂಗಣವನ್ನು ನೋಡಿದ ತಕ್ಷಣ, ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಸಮೀಪಿಸುತ್ತಿರುವ ಕಾರಣ ಇಂತಹ ಅಂಗಣದಲ್ಲಿ ಆಡಿ ಅಪಾಯ ತಂದುಕೊಳ್ಳಲು ಬಯಸಲಾರೆ ಎಂದು ಸ್ಪಷ್ಟಪಡಿಸಿದರು. ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಉಮರ್ ರಶೀದ್ ನೇತೃತ್ವದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಕಾರ್ಯೋನ್ಮುಖರಾದರು. ಸೈನಾ, ಕಶ್ಯಪ್ ಹಾಗೂ ಸಾಯಿ ಪ್ರಣೀತ್ ಅವರಲ್ಲಿ ಸಂಜೆ ವೇಳೆಗೆ ತಮ್ಮ ಪಂದ್ಯವನ್ನು ಆಡುವಂತೆ ಮನವರಿಕೆ ಮಾಡಿದರು.

‘‘ಸಿಂಧು ತಮ್ಮ ಸಿಂಗಲ್ಸ್ ಪಂದ್ಯವನ್ನು ಆಡಿದ ಬಳಿಕ ಕೆಲವು ಸ್ಥಳದಲ್ಲಿ ಮರದ ಹಲಗೆಗಳು ಕಿತ್ತುಬರುತ್ತಿದ್ದವು. ಹಾಗಾಗಿ ಅದನ್ನು ಈಗ ಮತ್ತೆ ಜೋಡಿಸಬೇಕಾಗಿದೆ. ನಾವು ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯವನ್ನು ಆಡಲು ಸಂಜೆಗೆ ವಾಪಸಾಗುತ್ತೇವೆ’’ಎಂದು ಸೈನಾರ ಪತಿ ಹಾಗೂ ಸಹ ಆಟಗಾರ ಪಾರುಪಲ್ಲಿ ಕಶ್ಯಪ್ ಹೇಳಿದ್ದಾರೆ.  ಅಸ್ಸಾಂ ಬ್ಯಾಡ್ಮಿಂಟನ್ ಅಕಾಡಮಿಯ ಮೂರು ಅಂಗಣಗಳಲ್ಲಿ ಚಾಂಪಿಯನ್‌ಶಿಪ್‌ನಡೆಯುತ್ತಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಬೇಕಾಗಿದ್ದ ಕಶ್ಯಪ್ ಅವರು ಸೈನಾರೊಂದಿಗೆ ಸಮೀಪದ ಎರಡನೇ ಅಂಗಣಕ್ಕೆ ತೆರಳಿ ಅಂಗಣವನ್ನು ಪರೀಕ್ಷಿಸಿದ್ದಾರೆ.

ಸಿಂಧು ಇದೇ ಅಂಗಣದಲ್ಲಿ ಬೆಳಗ್ಗೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಿದ್ದು ಮಾಳವಿಕಾ ಬನ್ಸೋಡ್ ವಿರುದ್ಧ ನೇರ ಗೇಮ್‌ಗಳಿಂದ ಜಯ ಸಾಧಿಸಿದರು.

‘‘ಕೆಲವು ಸ್ಥಳದಲ್ಲಿ ಅಂಗಣ ಏರುಪೇರಾಗಿತ್ತು. ಹೀಗಾಗಿ ಮೂವರು ಆಟಗಾರರು ಪಂದ್ಯ ಆಡಲು ನಿರಾಕರಿಸಿದರು. ನಾವು ಸಮಸ್ಯೆಯನ್ನು ಬಗೆಹರಿಸಲಿದ್ದು, ತರುಣ್ ಫೂಕಾನ್ ಒಳಾಂಗಣ ಕ್ರೀಡಾಂಗಣದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದೇವೆ. ಎಲ್ಲಿ ಆಡಬೇಕೆನ್ನುವುದು ಆಟಗಾರರಿಗೆ ಬಿಟ್ಟ ವಿಚಾರ. ಸಂಜೆಗೆ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ ಆಡಲು ಅವರು ಒಪ್ಪಿಕೊಂಡಿದ್ದಾರೆ. ಉಳಿದ ಆಟಗಾರರು ಪ್ರಿ-ಕ್ವಾರ್ಟರ್ ಹಾಗೂ ಕ್ವಾರ್ಟರ್‌ಫೈನಲ್‌ಗಳನ್ನು ಇಂದೇ ಆಡಲಿದ್ದಾರೆ’’ ಎಂದು ರಶೀದ್ ಹೇಳಿದ್ದಾರೆ.

ಸಿಂಧು ಶುಭಾರಂಭ

ಗುವಾಹಟಿ, ಫೆ.14: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು 83ನೇ ಆವೃತ್ತಿಯ ನ್ಯಾಶನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಾಗ್ಪುರದ ಮಾಳವಿಕಾ ಬನ್ಸೋಡ್ ವಿರುದ್ಧ 21-11, 21-13 ನೇರ ಗೇಮ್‌ಗಳಿಂದ ಜಯ ಸಾಧಿಸಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ಈ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದರು. ಮಾಜಿ ಚಾಂಪಿಯನ್ ಸಿಂಧು ನೇಪಾಲದಲ್ಲಿ ನಡೆದ ದಕ್ಷಿಣ ಏಶ್ಯ ಅಂಡರ್-21 ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ಖೇಲೊ ಇಂಡಿಯಾ ಗೇಮ್ಸ್ ನಲ್ಲಿ ರನ್ನರ್ಸ್‌ಅಪ್ ಆಗಿದ್ದ ಮಾಳವಿಕಾ ವಿರುದ್ಧ ಸುಲಭ ಜಯ ಸಾಧಿಸಿದರು. ಬುಧವಾರ ಚಾಂಪಿಯನ್‌ಶಿಪ್‌ನ ಸೂಪರ್ ಡ್ರಾ ಪ್ರಕ್ರಿಯೆ ನಡೆದಿದ್ದು, ಕಳೆದ ವರ್ಷದಂತೆಯೇ ವಿಶ್ವ ಹಾಗೂ ದೇಶೀಯ ರ್ಯಾಂಕಿಂಗ್ ಆಧಾರದಲ್ಲಿ ಸ್ಪರ್ಧೆಯ ಅಗ್ರ-8 ಆಟಗಾರರಿಗೆ ಸಿಂಗಲ್ಸ್ ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News