ಕೊಹ್ಲಿ, ಬುಮ್ರಾ ವಾಪಸ್; ಮಾಯಾಂಕ್ ಮರ್ಕಂಡೆಗೆ ಅವಕಾಶ

Update: 2019-02-15 18:00 GMT

ಹೊಸದಿಲ್ಲಿ, ಫೆ.15: ಮುಂಬರುವ ಆಸ್ಟ್ರೇಲಿಯ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಆಯ್ಕೆ ಸಮಿತಿಯು ಶುಕ್ರವಾರ 15 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಿದೆ.

ನ್ಯೂಝಿಲೆಂಡ್ ವಿರುದ್ಧ ಅಂತಿಮ 2 ಏಕದಿನ ಹಾಗೂ ಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಫೆ.24 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟ್ವೆಂಟಿ-20 ಸರಣಿಗೆ ತಂಡಕ್ಕೆ ವಾಪಸಾಗಲಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಹಾಗೂ ಕಿವೀಸ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಕೂಡ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡದ ಪರ ಕೆಲವು ಉತ್ತಮ ಇನಿಂಗ್ಸ್ ಆಡಿದ್ದ ಕೆ.ಎಲ್.ರಾಹುಲ್ ಟಿ-20 ಹಾಗೂ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.

ಟಿವಿ ಕಾರ್ಯಕ್ರಮದಲ್ಲಿ ನೀಡಿದ್ದ ಸಂದರ್ಶನದ ವೇಳೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದ ರಾಹುಲ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಆಸ್ಟ್ರೆಲಿಯ ವಿರುದ್ದ ಸೀಮಿತ ಓವರ್ ಕ್ರಿಕೆಟ್ ಸರಣಿ ಹಾಗೂ ನ್ಯೂಝಿಲೆಂಡ್ ವಿರುದ್ಧ ಸರಣಿಯಿಂದ ವಾಪಸ್ ಬಂದಿದ್ದರು.

ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಲೆಗ್ ಸ್ಪಿನ್ನರ್ ಮಾಯಾಂಕ್ ಮರ್ಕಂಡೆ ಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮರ್ಕಂಡೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಭಾರತಕ್ಕೆ ಇನಿಂಗ್ಸ್ ಹಾಗೂ 68 ರನ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು.

ವೇಗದ ಬೌಲರ್ ಭುವನೇಶ್ವರ ಕುಮಾರ್‌ಗೆ ಟಿ-20 ಸರಣಿ ಹಾಗೂ ಮೊದಲೆರಡು ಏಕದಿನ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಕುಮಾರ್ ಬದಲಿಗೆ ಸಿದ್ಧಾರ್ಥ್ ಕೌಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚೆನ್ನೈ ದಾಂಡಿಗ ದಿನೇಶ್ ಕಾರ್ತಿಕ್ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡ ಪ್ರಮುಖ ಆಟಗಾರ. ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್ ಸ್ಥಾನಕ್ಕೆ ರಿಷಭ್ ಪಂತ್ ಅವಕಾಶ ಪಡೆದಿದ್ದಾರೆ. ಖಲೀಲ್ ಅಹ್ಮದ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಉಮೇಶ್ ಯಾದವ್ ಟಿ-20 ಸರಣಿಗೆ ಆಯ್ಕೆಯಾಗಿದ್ದಾರೆ.

ಭಾರತ ಫೆ.24 ರಿಂದ ಆಸೀಸ್ ವಿರುದ್ಧ 2 ಟಿ-20 ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್‌ಗಿಂತ ಮೊದಲು ಭಾರತ ಆಡಲಿರುವ ಕೊನೆಯ ಅಂತರ್‌ರಾಷ್ಟ್ರೀಯ ಸರಣಿ ಇದಾಗಿದೆ.

5 ಪಂದ್ಯಗಳ ಏಕದಿನ ಸರಣಿಯು ಮಾ.2 ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಆ ಬಳಿಕ ನಾಗ್ಪುರ(ಮಾ.5), ರಾಂಚಿ(ಮಾ.8), ಮೊಹಾಲಿ(ಮಾ.10) ಹಾಗೂ ದಿಲ್ಲಿ(ಮಾ.13)ಯಲ್ಲಿ ಪಂದ್ಯಗಳು ನಡೆಯುವುದು.

ಟಿ-20 ಸರಣಿಗೆ ಭಾರತ ತಂಡ

►ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವಿಜಯ ಶಂಕರ್, ಯಜುವೇಂದ್ರ ಚಹಾಲ್, ಜಸ್‌ಪ್ರಿತ್ ಬುಮ್ರಾ, ಉಮೇಶ್ ಯಾದವ್,ಸಿದ್ಧಾರ್ಥ್ ಕೌಲ್, ಮಾಯಾಂಕ್ ಮರ್ಕಂಡೆ.

ಮೊದಲ, 2ನೇ ಏಕದಿನಕ್ಕೆ ಭಾರತ ತಂಡ

►ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ),ಶಿಖರ್ ಧವನ್, ಅಂಬಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಶಮಿ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ವಿಜಯ ಶಂಕರ್, ರಿಷಭ್ ಪಂತ್, ಸಿದ್ಧಾರ್ಥ್ ಕೌಲ್, ಕೆ.ಎಲ್.ರಾಹುಲ್.

ಉಳಿದ 3 ಪಂದ್ಯಗಳಿಗೆ ಭಾರತ ತಂಡ

►ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ),ಶಿಖರ್ ಧವನ್, ಅಂಬಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ ಕುಮಾರ್, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ವಿಜಯ ಶಂಕರ್, ರಿಷಭ್ ಪಂತ್, ಕೆ.ಎಲ್.ರಾಹುಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News