ಇಂಗ್ಲೆಂಡ್‌ ಲಯನ್ಸ್ ವಿರುದ್ಧ ಗರ್ಜಿಸಿದ ಭಾರತ ‘ಎ’

Update: 2019-02-15 18:03 GMT

2ನೇ ಟೆಸ್ಟ್

ಮೈಸೂರು,ಫೆ.15: ಪಂಜಾಬ್ ಲೆಗ್ ಸ್ಪಿನ್ನರ್ ಮಾಯಾಂಕ್ ಮರ್ಕಂಡೆ ಐಪಿಎಲ್‌ನಲ್ಲಿ ಭರ್ಜರಿ ಎಂಟ್ರಿ ಪಡೆದು ಪಂಜಾಬ್ ಹಿರಿಯರ ತಂಡ, ಭಾರತದ ಎಮರ್ಜಿಂಗ್ ಹಾಗೂ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯುವ ಟಿ-20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಮರ್ಕಂಡೆಗೆ ಇನ್ನೂ 22 ವರ್ಷವಾಗಿಲ್ಲ.

ಶುಕ್ರವಾರ ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲು ಮೈದಾನದಲ್ಲಿ ಲಂಬೂ ಸ್ಪಿನ್ ಬೌಲರ್ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು. ಐದು ವಿಕೆಟ್ ಗೊಂಚಲು ಪಡೆದ ಮಾಯಾಂಕ್ ಭಾರತ ಱಎೞತಂಡ ಇಂಗ್ಲೆಂಡ್ ಲಯನ್ಸ್ ತಂಡವನ್ನು ದ್ವಿತೀಯ ಹಾಗೂ ಕೊನೆಯ ಚತುರ್ದಿನ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 68 ರನ್‌ಗಳಿಂದ ಮಣಿಸಲು ನೆರವಾದರು. ಕೆ.ಎಲ್. ರಾಹುಲ್ ನೇತೃತ್ವದ ಭಾರತ ‘ಎ’ ತಂಡ ಟೀ ವಿರಾಮಕ್ಕೆ 20 ನಿಮಿಷ ಮೊದಲೇ ಇನ್ನೂ ಒಂದು ದಿನದಾಟ ಬಾಕಿ ಇರುವಾಗಲೇ ಇಂಗ್ಲೆಂಡ್ ಲಯನ್ಸ್ ವಿರುದ್ಧ ಜಯ ಸಾಧಿಸಿದೆ. ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಕೇರಳದ ವಯನಾಡ್‌ನಲ್ಲಿ ಕಳೆದ ವಾರ ಉಭಯ ತಂಡಗಳ ಮಧ್ಯೆ ನಡೆದಿದ್ದ ಮೊದಲ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಶುಕ್ರವಾರ 224 ರನ್ ಹಿನ್ನಡೆಯೊಂದಿಗೆ ವಿಕೆಟ್ ನಷ್ಟವಿಲ್ಲದೆ 24 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡ ಮರ್ಕಂಡೆ(5-31), ಜಲಜ್ ಸಕ್ಸೇನ(2-40) ಹಾಗೂ ಶಹಬಾಝ್ ನದೀಮ್(1-25)ದಾಳಿಗೆ ತತ್ತರಿಸಿ 53.3 ಓವರ್‌ಗಳಲ್ಲಿ ಕೇವಲ 180 ರನ್‌ಗೆ ಗಂಟುಮೂಟೆ ಕಟ್ಟಿತು.

ಬೆನ್ ಡಕೆಟ್(50,61 ಎಸೆತ, 4 ಬೌಂಡರಿ, 2 ಸಿಕ್ಸರ್)ಇಂಗ್ಲೆಂಡ್‌ಗೆ ಉತ್ತಮ ಆರಂಭ ನೀಡಿದರು. ಡಕೆಟ್ ಹಾಗೂ ಮ್ಯಾಕ್ಸ್ ಹೋಲ್ಡನ್(7) ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಸಕ್ಸೇನ ಬೇರ್ಪಡಿಸಿದರು. ಇಂಗ್ಲೆಂಡ್ ಲಂಚ್ ವಿರಾಮದ ವೇಳೆ 3 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಆ ಬಳಿಕ ಪ್ರವಾಸಿ ತಂಡ ತನ್ನ ಲಯ ಕಳೆದುಕೊಂಡಿತು. ಸ್ಯಾನ್ ಹೈನ್(15) ಹಾಗೂ ನಾಯಕ ಸ್ಯಾಮ್ ಬಿಲ್ಲಿಂಗ್ಸ್(20)4ನೇ ವಿಕೆಟ್‌ಗೆ 31 ರನ್ ಸೇರಿಸಿದರು. ಲೂವಿಸ್ ಗ್ರೆಗೊರಿ(44,49 ಎಸೆತ) ಹಾಗೂ ಡ್ಯಾನಿ ಬಿಗ್ಸ್(2) ಕೊನೆಯ ವಿಕೆಟ್‌ಗೆ 25 ರನ್ ಜೊತೆಯಾಟ ನಡೆಸಿದರೂ ತಂಡವನ್ನು ಹೀನಾಯ ಸೋಲಿನಿಂದ ಬಚಾವಾಗಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News