ಸೋನಿಯಾ, ಲವ್ಲಿನಾ ಕ್ವಾ. ಫೈನಲ್‌ ಗೆ

Update: 2019-02-15 18:10 GMT

ಹೊಸದಿಲ್ಲಿ, ಫೆ.15: ಬಲ್ಗೇರಿಯದ ಸೋಫಿಯಾದಲ್ಲಿ ನಡೆಯುತ್ತಿರುವ 70ನೇ ಆವೃತ್ತಿಯ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಪುರುಷ ಬಾಕ್ಸರ್‌ಗಳು ನಿರಾಶಾದಾಯಕ ಆರಂಭ ಪಡೆದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್(57ಕೆಜಿ) ಸಹಿತ ಮೂವರು ಭಾರತೀಯ ಮಹಿಳಾ ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ರಾತ್ರಿ ನಡೆದ ಪ್ರತಿಷ್ಠಿತ ಯುರೋಪಿಯನ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಲವ್ಲಿನಾ ಬೊರ್ಗೊಹೈನ್(69ಕೆಜಿ) ಹಾಗೂ ಪ್ವಿಲಾವೊ ಬಸುಮತರಿ(64ಕೆಜಿ)ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಎರಡು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸೋನಿಯಾ ಸರ್ಬಿಯದ ಜೆಲೆನಾ ಝೆಕಿಕ್‌ರನ್ನು 5-0 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅಮೆರಿಕದ ಯರಿಸೆಲ್ ರಮಿರೆಝ್‌ರನ್ನು ಎದುರಿಸಲಿದ್ದಾರೆ.

ಕಳೆದ ವರ್ಷ ಇಂಡಿಯನ್ ಓಪನ್‌ನಲ್ಲಿ ಚಿನ್ನ ಜಯಿಸಿರುವ ಬೊರ್ಗೊಹೈನ್ ಆಸ್ಟ್ರೇಲಿಯದ ಜೆಸ್ಸಿಕಾ ಮೆಸ್ಸಿನಾರನ್ನು ಎದುರಿಸಲಿದ್ದಾರೆ.

ಬಲ್ಗೇರಿಯದ ಮೆಲಿಸ್ ಯೊನುರೊವಾ ಕಠಿಣ ಸವಾಲನ್ನು ಮೆಟ್ಟಿ ನಿಂತ ಬಸುಮತರಿ 3-2 ಅಂತರದಿಂದ ಮಣಿಸಿದರು. ಬಸುಮತರಿ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಕ್ರೊಯೇಶಿಯದ ಮರಿಜಾ ಮಲೇನ್ಸಿಯಾರನ್ನು ಎದುರಿಸಲಿದ್ದಾರೆ.

ಇದೇ ವೇಳೆ, ಪುರುಷ ಬಾಕ್ಸರ್‌ಗಳು ಕಳಪೆ ಪ್ರದರ್ಶನ ನೀಡಿದರು. ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಪದಕ ಜಯಿಸಿರುವ ಮನ್‌ದೀಪ್ ಜಾಂಗ್ರಾ(69ಕೆಜಿ) ಹಾಗೂ ಹರ್ಷ ಲಾಕ್ರಾ(81ಕೆಜಿ)ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದಾರೆ.

ಜಾಂಗ್ರಾ ಉಕ್ರೇನ್‌ನ ವಿಕ್ಟರ್ ಪೆಟ್ರೊವ್‌ವಿರುದ್ಧ 0-5 ಅಂತರದಿಂದ ಶರಣಾದರು. ಲಾಕ್ರಾ ಅಝರ್‌ಬೈಜಾನ್‌ನ ರಾವುಫ್ ರಹಿಮೊವ್ ವಿರುದ್ಧ ಸೋತಿದ್ದಾರೆ.

ಭಾರತ ಕಳೆದ ವರ್ಷ ಇದೇ ಟೂರ್ನಿಯಲ್ಲಿ ಒಟ್ಟು 11 ಪದಕಗಳನ್ನು ಜಯಿಸಿ ಉತ್ತಮ ಸಾಧನೆ ಮಾಡಿತ್ತು. ಈಗ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ 40 ದೇಶಗಳ 300ಕ್ಕೂ ಅಧಿಕ ಬಾಕ್ಸರ್‌ಗಳು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News