ಸೈನಾಗೆ ಸತತ ಎರಡನೇ ಕಿರೀಟ

Update: 2019-02-16 17:54 GMT

ಹೊಸದಿಲ್ಲಿ, ಫೆ.16: ಸೊಗಸಾದ ಲಯ ತೋರಿದ ಚಾಂಪಿಯನ್ ಆಟಗಾರ್ತಿ ಸೈನಾ ನೆಹ್ವಾಲ್ ಶನಿವಾರ ಗುವಾಹಟಿಯಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಪಿ.ವಿ.ಸಿಂಧು ಅವರನ್ನು 21-18, 21-15 ಗೇಮ್‌ಗಳಿಂದ ಮಣಿಸಿದ್ದಾರೆ. ಈ ಮೂಲಕ ಸತತ ಎರಡನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಕೇವಲ 30 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಪಂದ್ಯದಲ್ಲಿ ಸೈನಾ ಸಂಪೂರ್ಣ ಪಾರಮ್ಯ ಮೆರೆದರು.

ಪ್ರಥಮ ಗೇಮ್‌ನಲ್ಲಿ ನಿಧಾನಗತಿಯ ಆರಂಭ ಪಡೆದ ಸೈನಾ, ಆ ಬಳಿಕ ಸಿಂಧು ವಿರುದ್ಧ ಪುಟಿದೆದ್ದು 5-5 ಅಂಕಗಳ ಸಮಬಲ ಸಾಧಿಸಿದರು. ವಿರಾಮದ ಅವಧಿಯಲ್ಲಿ ಸೈನಾ 11-10ರಿಂದ ಮುಂದಿದ್ದರು. ವಿರಾಮದ ನಂತರವೂ ತಮ್ಮ ಅದ್ಭುತ ಫಾರ್ಮ್‌ನ್ನು ಮುಂದುವರಿಸಿದ ವಿಶ್ವ ನಂ.9ರ ಆಟಗಾರ್ತಿ ಸೈನಾ ಅಂತಿಮವಾಗಿ ಗೇಮ್‌ನ್ನು 21-18ರಿಂದ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲೂ ಸಿಂಧು ಫಾರ್ಮ್ ಗೆ ಮರಳಲು ಪರದಾಡಬೇಕಾಯಿತು. ಈ ಗೇಮ್‌ನ ವಿರಾಮದ ಅವಧಿಯಲ್ಲಿ ಸೈನಾ 11-9ರ ಮುನ್ನಡೆ ಪಡೆದರು. ಎರಡನೇ ಗೇಮ್‌ನ ಕೊನೆಯ ಅವಧಿಯಲ್ಲಿ ಸತತ ಅಂಕ ಗಳಿಕೆಯ ಮೂಲಕ ಸಿಂಧುರನ್ನು ಕಂಗೆಡಿಸಿದ ಸೈನಾ ಅಂತಿಮವಾಗಿ 21-18, 21-15 ಗೇಮ್‌ಗಳಿಂದ ಗೆಲುವಿನ ನಗೆ ಬೀರಿದರು.

2006, 2007 ಹಾಗೂ 2018ರಲ್ಲಿ ಟ್ರೋಫಿ ಜಯಿಸಿರುವ ಸೈನಾಗೆ ಇದು ನಾಲ್ಕನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಸಿಂಗಲ್ಸ್ ಕಿರೀಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News