ಸೌರಭ್ ವರ್ಮಾಗೆ ಹ್ಯಾಟ್ರಿಕ್ ಪ್ರಶಸ್ತಿ ಗರಿ

Update: 2019-02-16 17:56 GMT

ಗುವಾಹಟಿ, ಫೆ.16: ಯುವ ಆಟಗಾರ ಲಕ್ಷ ಸೇನ್ ಅವರನ್ನು ಫೈನಲ್ ಪಂದ್ಯದಲ್ಲಿ ನೇರ ಗೇಮ್‌ಗಳಿಂದ ಮಣಿಸಿದ ಸೌರಭ್ ವರ್ಮಾ ಹಿರಿಯರ 83ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಅವರು ಮೂರನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡ ಸಾಧನೆ ಮಾಡಿದ್ದಾರೆ.

2011 ಹಾಗೂ 2017ರಲ್ಲಿ ಚಾಂಪಿಯನ್ ಆಗಿದ್ದ 26 ವರ್ಷದ ಸೌರಭ್, ಈ ಪಂದ್ಯದಲ್ಲಿ ಉತ್ತಮ ತಾಂತ್ರಿಕ ಕೌಶಲ್ಯ ತೋರಿದರು. ಏಶ್ಯನ್ ಜೂನಿಯರ್ ಚಾಂಪಿಯನ್ 17 ವರ್ಷದ ಲಕ್ಷ ಸೇನ್‌ರನ್ನು 21-18, 21-13 ಗೇಮ್‌ಗಳಿಂದ ಮಣಿಸಿದರು. ಪಂದ್ಯದ ಆರಂಭದಲ್ಲಿ ಉಭಯ ಆಟಗಾರು ಪರಸ್ಪರ ಮೀರಿಸುವಂತೆ ಪೈಪೋಟಿಗಿಳಿದರು. ಮೊದಲಿಗೆ 11-6 ಅಂಕಗಳಿಂದ ಮುಂದಿದ್ದ ಲಕ್ಷ ಆ ಬಳಿಕ ಮಂಕಾದರು. ರಕ್ಷಣಾ ಹಾಗೂ ಆಕ್ರಮಣಕಾರಿ ವಿಭಾಗದಲ್ಲಿ ಭಾರೀ ಸಮತೋಲನ ತೋರಿದರೂ ಲಕ್ಷ ಸೇನ್ ಅಂತಿಮವಾಗಿ ಮೊದಲ ಗೇಮ್‌ನ್ನು 21-18 ಅಂಕಗಳ ಅಲ್ಪ ಅಂತರದಲ್ಲಿ ಕಳೆದುಕೊಂಡರು. 2ನೇ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಸೌರಭ್ 21-13ರಿಂದ ಯುವ ಆಟಗಾರನಿಗೆ ಸೋಲುಣಿಸಿದರು.

ಫೆ.2017ರಲ್ಲೂ ಸೌರಭ್ ಹಾಗೂ ಲಕ್ಷ ಸೇನ್ ಮುಖಾಮುಖಿಯಾಗಿದ್ದರು.

ಆರಂಭದಲ್ಲಿ ಎರಡನೇ ಶ್ರೇಯಾಂಕದ ಜೋಡಿ ಪ್ರಣವ್ ಚೋಪ್ರಾ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿಗೆ ಮುತ್ತಿಕ್ಕಿತು. ಫೈನಲ್ ಪಂದ್ಯದಲ್ಲಿ ಅವರು ಅಗ್ರ ಶ್ರೇಯಾಂಕದ ಅರ್ಜುನ್ ಎಮ್.ಆರ್. ಹಾಗೂ ಶ್ಲೋಕ್ ರಾಮಚಂದ್ರನ್ ಅವರನ್ನು 21-13, 22-20 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಪಂದ್ಯ ಕೇವಲ 33 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News