ರಣಜಿ ಚಾಂಪಿಯನ್ ವಿದರ್ಭಕ್ಕೆ ಸತತ ಎರಡನೇ ಇರಾನಿ ಕಪ್

Update: 2019-02-16 17:57 GMT

ನಾಗ್ಪುರ,ಫೆ.16: ಶೇಷ ಭಾರತ ತಂಡದ ಅಗ್ರ ಕ್ರಮಾಂಕದ ದಾಂಡಿಗ ಹನುಮ ವಿಹಾರಿ ಪಂದ್ಯವೊಂದರಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದರೂ ಸಾಂಘಿಕ ಪ್ರದರ್ಶನ ನೀಡಿದ ರಣಜಿ ಚಾಂಪಿಯನ್ ವಿದರ್ಭ ತಂಡ ಸತತ ಎರಡನೇ ಋತುವಿನಲ್ಲೂ ಇರಾನಿ ಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತನ್ನ ಪಾರಮ್ಯ ಮೆರೆದಿದೆ.

ವಿದರ್ಭ ತಂಡ ರಣಜಿ ಹಾಗೂ ಇರಾನಿ ಕಪ್ ಎತ್ತಿ ಹಿಡಿದ ಮೂರನೇ ತಂಡವಾಗಿದೆ. ಮುಂಬೈ ಹಾಗೂ ಕರ್ನಾಟಕ ತಂಡಗಳು ಈ ಸಾಧನೆ ಮಾಡಿದ್ದವು.

ಇದೇ ವೇಳೆ, ವಿದರ್ಭ ನಾಯಕ ಫೈಝ್ ಫಝಲ್ ಇಡೀ ತಂಡದ ಬಹುಮಾನ ಮೊತ್ತವನ್ನು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಸಿಆರ್‌ಪಿಎಫ್ ಯೋಧರ ಕುಟುಂಬಕ್ಕೆ ದಾನ ನೀಡುವುದಾಗಿ ಘೋಷಿಸಿ ಎಲ್ಲರ ಮನ ಗೆದ್ದಿದ್ದಾರೆ.

‘‘ನಮ್ಮ ತಂಡದ ಎಲ್ಲ ಸದಸ್ಯರು ಪುಲ್ವಾಮದಲ್ಲಿ ಉಗ್ರ ಕೃತ್ಯಕ್ಕೆ ಬಲಿಯಾದ ವೀರ ಯೋಧರಿಗೆ ತಮಗೆ ಲಭಿಸಿದ ಬಹುಮಾನ ಮೊತ್ತ ದಾನ ನೀಡಲು ನಿರ್ಧರಿಸಿದ್ದಾರೆ. ಇದು ನಮ್ಮ ತಂಡ ಹಾಗೂ ವಿಸಿಎಯಿಂದ ಕೊಡುತ್ತಿರುವ ಕಿರಿದಾದ ಕೊಡುಗೆಯಾಗಿದೆ’’ ಎಂದು ಫೈಝಲ್ ಹೇಳಿದ್ದಾರೆ.

280 ರನ್ ಸವಾಲು ಪಡೆದಿದ್ದ ವಿದರ್ಭ ತಂಡ 103.1 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 269 ರನ್ ಕಲೆ ಹಾಕಿ ಗೆಲ್ಲಲು 11 ರನ್ ಅಗತ್ಯವಿದ್ದಾಗ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ವಿದರ್ಭ ಇರಾನಿ ಕಪ್ ಮೇಲೆ ಹಕ್ಕು ಚಲಾಯಿಸಿತು. ಫೈಝ್ ಫಝಲ್ ನಾಯಕತ್ವದ ವಿದರ್ಭ ತಂಡ ಸತತ ಎರಡನೇ ವರ್ಷವೂ ರಣಜಿ ಹಾಗೂ ಇರಾನಿ ಕಪ್ ಎರಡನ್ನೂ ಗೆದ್ದ ಸಾಧನೆ ಮಾಡಿದೆ. ಅಜಿಂಕ್ಯ ರಹಾನೆ, ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಹಾಗೂ ಮಾಯಾಂಕ್ ಅಗರ್ವಾಲ್‌ರಂತಹ ಸ್ಟಾರ್ ಆಟಗಾರರನ್ನು ಒಳಗೊಂಡ ಶೇಷ ಭಾರತವನ್ನು ಈ ಋತುವಿನ ಅಗ್ರ ಸ್ಕೋರರ್ ವಸೀಂ ಜಾಫರ್ ಹಾಗೂ ಉಮೇಶ್ ಯಾದವ್ ಅನುಪಸ್ಥಿತಿಯಲ್ಲಿ ಹಿಮ್ಮೆಟ್ಟಿಸಿದ್ದು ವಿದರ್ಭದ ಮಹತ್ವದ ಸಾಧನೆಯಾಗಿದೆ.

ವಿದರ್ಭ 1 ವಿಕೆಟ್ ನಷ್ಟಕ್ಕೆ 37 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿತು. ನಾಗ್ಪುರದ ವಿಸಿಎ ಸ್ಟೇಡಿಯಂನ ಐದನೇ ಹಾಗೂ ಅಂತಿಮ ದಿನ ಪಂದ್ಯ ಜಯಿಸಲು 243 ರನ್ ಅಗತ್ಯವಿತ್ತು. ವಸೀಂ ಜಾಫರ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ 18ರ ಹರೆಯದ ಅಥರ್ವ ಟೈಡ್(72 ರನ್, 185 ಎಸೆತ, 8 ಬೌಂಡರಿ, 1 ಸಿಕ್ಸರ್)ಆರಂಭಿಕ ಆಟಗಾರ ಸಂಜಯ್ ರಾಮಸ್ವಾಮಿ (42,131 ಎಸೆತ, 4 ಬೌಂಡರಿ, 1 ಸಿಕ್ಸರ್)ಅವರೊಂದಿಗೆ 2ನೇ ವಿಕೆಟ್‌ಗೆ 116 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ರಾಹುಲ್ ಚಹಾರ್ ಬೇರ್ಪಡಿಸಿದರು.

ಜಾಫರ್ ಅನುಪಸ್ಥಿತಿಯಲ್ಲಿ ತಂಡದಲ್ಲಿರುವ ಏಕೈಕ ವೃತ್ತಿಪರ ಆಟಗಾರನಾಗಿರುವ ಗಣೇಶ್ ಸತೀಶ್(87, 168 ಎಸೆತ, 9 ಬೌಂಡರಿ, 1 ಸಿಕ್ಸರ್)ತಂಡದ ರನ್ ಚೇಸಿಂಗ್‌ಗೆ ಬಲ ನೀಡಿದರು. ಯುವ ಆಟಗಾರ ಅಥರ್ವರೊಂದಿಗೆ 3ನೇ ವಿಕೆಟ್‌ಗೆ 30 ರನ್ ಸೇರಿಸಿದ ಸತೀಶ್ ಆ ನಂತರ ಮೋಹಿತ್ ಕಾಳೆ(37, 90 ಎಸೆತ) ಅವರೊಂದಿಗೆ 4ನೇ ವಿಕೆಟ್‌ಗೆ 83 ರನ್ ಜೊತೆಯಾಟದಲ್ಲಿ ಭಾಗಿಯಾದರು. ಕಾಳೆ ಟೀ ವಿರಾಮಕ್ಕೆ ಮೊದಲು ಧರ್ಮೇಂದ್ರ ಜಡೇಜಗೆ ವಿಕೆಟ್ ಒಪ್ಪಿಸಿದರು.

ಸತೀಶ್ ಶತಕ ಗಳಿಸುವ ಇರಾದೆಯಲ್ಲಿ ಚಹಾರ್ ಬೌಲಿಂಗ್‌ನಲ್ಲಿ 2 ಬೌಂಡರಿ ಸಿಡಿಸಿದರು. 104ನೇ ಓವರ್‌ನ ಮೊದಲ ಎಸೆತದಲ್ಲಿ ಪಾರ್ಟ್-ಟೈಂ ಬೌಲರ್ ಹನುಮ ವಿಹಾರಿ ಎಸೆತವನ್ನು ಕೆಣಕಲು ಯತ್ನಿಸಿದ ಸತೀಶ್ 87 ರನ್‌ಗೆ ವಿಕೆಟ್ ಒಪ್ಪಿಸಿದರು. ಆಗ ವಿದರ್ಭ ಗೆಲ್ಲಲು ಕೇವಲ 11 ರನ್ ಅಗತ್ಯವಿತ್ತು. ವಿದರ್ಭಕ್ಕೆ ಪಂದ್ಯ ಗೆಲ್ಲಲು ಎಲ್ಲ ಅವಕಾಶವಿದ್ದರೂ ಉಭಯ ತಂಡದ ನಾಯಕರಾದ ಫಝಲ್ ಹಾಗೂ ಅಜಿಂಕ್ಯ ರಹಾನೆ ಪಂದ್ಯವನ್ನು ಕೊನೆಗೊಳಿಸಲು ನಿರ್ಧರಿಸಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅಕ್ಷಯ್ ವಾಡ್ಕರ್ ಔಟಾಗದೆ 10 ರನ್ ಗಳಿಸಿದರು.

ಆಫ್-ಸ್ಪಿನ್ನರ್ ಕೆ.ಗೌತಮ್ ಭುಜನೋವಿನಿಂದಾಗಿ ಪಂದ್ಯದ 2ನೇ ದಿನವೇ ಬೌಲಿಂಗ್ ಮಾಡುವುದರಿಂದ ಹಿಂದೆ ಸರಿದರು. ಗೌತಮ್ ಅನುಪಸ್ಥಿತಿ ಶೇಷ ಭಾರತಕ್ಕೆ ಫಲಿತಾಂಶವನ್ನು ತನ್ನ ಪರವಾಗಿಸಲು ತೊಡಕಾಯಿತು. ಅನನುಭವಿ ಬೌಲರ್‌ಗಳಿಗೆ ವಿದರ್ಭ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.

ಚೊಚ್ಚಲ ಶತಕ ಸಿಡಿಸಿ ವಿದರ್ಭಕ್ಕೆ ಮೊದಲ ಇನಿಂಗ್ಸ್‌ನಲ್ಲಿ 95 ರನ್ ಮುನ್ನಡೆ ಪಡೆಯಲು ಪ್ರಮುಖ ಪಾತ್ರವಹಿಸಿದ್ದ ಆಲ್‌ರೌಂಡರ್ ಅಕ್ಷಯ್ ಕರ್ನೆವಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News