ಗಪ್ಟಿಲ್ ಶತಕ: ಎರಡನೇ ಏಕದಿನದಲ್ಲಿ ಗೆಲುವು

Update: 2019-02-16 18:02 GMT

ಕ್ರೈಸ್ಟ್‌ಚರ್ಚ್, ಫೆ.16: ಉತ್ಸಾಹಿತ ಮಾರ್ಟಿನ್ ಗಪ್ಟಿಲ್ ಅವರ ಸೊಗಸಾದ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಬಾಂಗ್ಲಾವನ್ನು ಎರಡನೇ ಏಕದಿನ ಪಂದ್ಯದಲ್ಲಿ ಶನಿವಾರ 8 ವಿಕೆಟ್‌ಗಳಿಂದ ಮಣಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಯಿಂದ ಮುನ್ನಡೆ ಗಳಿಸಿ ಸರಣಿ ಜಯಿಸಿದೆ.

ತಮ್ಮ 16ನೇ ಶತಕ ಬಾರಿಸಿ ಸಂಭ್ರಮಿಸಿದ ಗಪ್ಟಿಲ್(118) ಇನ್ನೂ 13.5 ಓವರ್‌ಗಳು ಬಾಕಿ ಇರುವಂತೆಯೇ ಕಿವೀಸ್ ಗೆ ಬಾಂಗ್ಲಾ ನೀಡಿದ 227 ರನ್ ಗುರಿಯನ್ನು ತಲುಪುವಂತೆ ಮಾಡಿದರು. ಆತಿಥೇಯರು ಕೇವಲ 2 ವಿಕೆಟ್ ಕಳೆದುಕೊಂಡರು.

ಇತ್ತೀಚೆಗೆ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಗಳಿಸಲು ಭಾರೀ ಪರದಾಟ ನಡೆಸಿದ್ದ ಗಪ್ಟಿಲ್, ಈ ಪಂದ್ಯದಲ್ಲಿ ತಾನೆದುರಿಸಿದ 88 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿದರು. ಕಿವೀಸ್ ಪರ ನಾಯಕ ಕೇನ್ ವಿಲಿಯಮ್ಸನ್ ಅರ್ಧಶತಕ (ಅಜೇಯ 65) ಸಿಡಿಸಿ ಗೆಲುವನ್ನು ಸುಲಭವಾಗಿಸಿದರು.

ಬಾಂಗ್ಲಾ ಪರ ಮುಸ್ತಫಿಝುರ್ರಹ್ಮಾನ್ ನ್ಯೂಝಿಲೆಂಡ್ ಕಳೆದುಕೊಂಡ ಎರಡೂ ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಯಲ್ಪಟ್ಟ ಪ್ರವಾಸಿ ಬಾಂಗ್ಲಾ ತಂಡಕ್ಕೆ ಮುಹಮ್ಮದ್ ಮಿಥುನ್ ಅರ್ಧಶತಕ (57) ಬಾರಿಸಿ ಸ್ಪರ್ಧಾತ್ಮಕ ಮೊತ್ತ ಜಮೆ ಮಾಡಲು ನೆರವಾದರು. ಅವರಿಗೆ ಉತ್ತಮ ಸಾಥ್ ನೀಡಿದ ಶಬ್ಬೀರ್ರಹ್ಮಾನ್(43), ವಿಕೆಟ್ ಕೀಪರ್ ದಾಂಡಿಗ ಮುಶ್ಫಿಕುರ್ರಹೀಮ್(24) ಉತ್ತಮ ಆಟವಾಡಿದರು. 49.4 ಓವರ್‌ಗಳಲ್ಲಿ ಬಾಂಗ್ಲಾ 226 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕಿವೀಸ್ ಪರ ಲಾಕಿ ಫರ್ಗ್ಯುಸನ್ (43ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು. ಟಾಡ್ ಆ್ಯಸ್ಲೆ (52ಕ್ಕೆ 2) ಹಾಗೂ ನೀಶಾಮ್(21ಕ್ಕೆ 2) ಬಾಂಗ್ಲಾ ಪತನಕ್ಕೆ ಕಾರಣರಾದರು. ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಮುಂದಿನ ಬುಧವಾರ ಡ್ಯುನೆಡಿನ್‌ನಲ್ಲಿ ನಡೆಯಲಿದೆ. ಅದಾದ ಬಳಿಕ ಉಭಯ ತಂಡಗಳ ಮಧ್ಯೆ ಟೆಸ್ಟ್ ಸರಣಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News