×
Ad

ಗೌರವ್, ಝರೀನ್‌ಗೆ ಜಯ

Update: 2019-02-16 23:33 IST

ಸೋಫಿಯ(ಬಲ್ಗೇರಿಯ), ಫೆ.16: ಕಾಮನ್‌ವೆಲ್ತ್ ಗೇಮ್ಸ್ ಬಂಗಾರ ಪದಕ ವಿಜೇತ ಗೌರವ್ ಸೋಲಂಕಿ(52 ಕೆ.ಜಿ. ವಿಭಾಗ) ಹಾಗೂ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಆಟಗಾರ್ತಿ ನಿಖತ್ ಝರೀನ್(51 ಕೆ.ಜಿ. ವಿಭಾಗ) ಇಲ್ಲಿ ನಡೆಯುತ್ತಿರುವ 70ನೇ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಪ್ರಿ-ಕ್ವಾರ್ಟರ್‌ಫೈನಲ್ ಹಾಗೂ ಮಹಿಳೆಯರ ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.

ಝರೀನ್ ಅವರು ಇಟಲಿಯ ಜಿಯೊವನ್ನಾ ಮಾರ್ಚಿಸ್ ಅವರನ್ನು ಬಗ್ಗುಬಡಿದರೆ, ಸೋಲಂಕಿ ಅಮೆರಿಕದ ಅಬ್ರಹಾಂ ಪೆರೆಝ್ ಅವರನ್ನು ಮಣಿಸಿದರು. ಕಳೆದ ವರ್ಷದ ಇಂಡಿಯಾ ಓಪನ್ ಹಾಗೂ ಕೆಮಿಸ್ಟ್ರಿ ಕಪ್‌ನಲ್ಲಿ ಚಿನ್ನದ ಪದಕ ವಿಜೇತ ಸೋಲಂಕಿ ತಮ್ಮ 16ರ ಘಟ್ಟದ ಪಂದ್ಯದಲ್ಲಿ ಕಝಕ್‌ಸ್ತಾನದ ಅನ್ವರ್ ಮುಝಪರೊವ್ ಅವರನ್ನು ಎದುರಿಸಲಿದ್ದಾರೆ.

ಹಲವು ಬಾರಿಯ ರಾಷ್ಟ್ರೀಯ ಪದಕ ವಿಜೇತ ಝರೀನ್ ತಮ್ಮ ಮುಂದಿನ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ಯಾನಾ ಬರಿಮ್ ಅವರ ಸವಾಲನ್ನು ಎದುರಿಸಲಿದ್ದಾರೆ. ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಭಾರತದ ನೀರಜ್, ಬಲ್ಗೇರಿಯದ ಅಸ್ಲಹಾನ್ ಮೆಹಮೆದೊವಾ ಅವರನ್ನು ಮಣಿಸಿದರು.

ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ವಿಜೇತ ಗೌರವ್ ಬಿಧುರಿ(56 ಕೆ.ಜಿ.) ಸ್ಥಳೀಯ ಖ್ಯಾತ ಆಟಗಾರ ಇಮ್ಯಾನ್ಯುಯೆಲ್ ಬೊಗೊವ್ ವಿರುದ್ಧ ಪ್ರಥಮ ಸುತ್ತಿನ ಪಂದ್ಯದಲ್ಲೇ ಸೋಲು ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News