ಹುತಾತ್ಮ ಯೋಧರ ಕುಟುಂಬಕ್ಕೆ ಸೆಹ್ವಾಗ್, ವಿಜೇಂದರ್ ನೆರವು

Update: 2019-02-16 18:08 GMT

ಹೊಸದಿಲ್ಲಿ, ಫೆ.16: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ವಿದರ್ಭ ಕ್ರಿಕೆಟ್ ತಂಡದ ಸದಸ್ಯರು ಗುರುವಾರ ಪುಲ್ವಾಮದಲ್ಲಿ ಭಯೋತ್ಪಾದಕನ ದಾಳಿಗೆ ಬಲಿಯಾದ ಸಿಆರ್‌ಪಿಎಫ್ ಯೋಧರ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.

ನಾವು ಏನು ಮಾಡಿದರೂ ಕಡಿಮೆ. ಉಗ್ರನ ದಾಳಿಗೆ ಪ್ರಾಣ ಕಳೆದುಕೊಂಡಿರುವ ಸಿಆರ್‌ಪಿಎಫ್‌ನ ವೀರ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾನು ಇಷ್ಟನ್ನು ಮಾತ್ರ ಮಾಡಬಲ್ಲೆ. ನನ್ನ ‘ಸೆಹ್ವಾಗ್ ಇಂಟರ್‌ನ್ಯಾಶನಲ್ ಸ್ಕೂಲ್’ನಲ್ಲಿ ಯೋಧರ ಮಕ್ಕಳಿಗೆ ಶಿಕ್ಷಣ ನೀಡುವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಸೆಹ್ವಾಗ್ ಯೋಧರ ಮೇಲೆ ಉಗ್ರ ದಾಳಿಯನ್ನು ಟ್ವಿಟರ್‌ನ ಮೂಲಕ ತೀವ್ರವಾಗಿ ಖಂಡಿಸಿದ್ದರು. ಇದೇ ವೇಳೆ ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಯೋಧರಿಗೆ ಸಹಾಯ ಹಸ್ತ ಚಾಚಿದ್ದಾರೆ. ‘‘ ನಾನು ನನ್ನ ಒಂದು ತಿಂಗಳ ಸಂಭಾವನೆಯನ್ನು ಹುತಾತ್ಮ ಯೋಧರಿಗೆ ಸಮರ್ಪಿಸುತ್ತೇನೆ. ಪ್ರತಿಯೊಬ್ಬರಿಗೂ ಮುಂದೆ ಬಂದು ವೀರ ಯೋಧರ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಯೋಧರ ಬೆಂಬಲಕ್ಕೆ ನಿಲ್ಲುವುದು ನಮ್ಮ ನೈತಿಕ ಕರ್ತವ್ಯ. ಅವರ ತ್ಯಾಗಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕಾಗಿದೆ’’ ಎಂದರು. ವಿದರ್ಭ ಕ್ರಿಕೆಟ್ ತಂಡದ ನಾಯಕ ಫೈಝ್ ಫಝಲ್ ಇರಾನಿ ಟ್ರೋಫಿ ಗೆಲುವಿನಿಂದ ಲಭಿಸುವ ಬಹುಮಾನ ಮೊತ್ತವನ್ನು ವೀರ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News