ರಾಷ್ಟ್ರೀಯ ನಡಿಗೆ ಸ್ಪರ್ಧೆ

Update: 2019-02-16 18:13 GMT

ಚೆನ್ನೈ, ಫೆ.16: ರಾಷ್ಟ್ರೀಯ ಆರನೇ ಮುಕ್ತ ನಡಿಗೆ ಸ್ಪರ್ಧೆಯ 20 ಕಿ.ಮೀ.(ಎಲೈಟ್) ವಿಭಾಗದಲ್ಲಿ ಶನಿವಾರ ಕೇರಳದ ಕೆ.ಟಿ.ಇರ್ಫಾನ್ ಹಾಗೂ ಬಿ.ಸೌಮ್ಯಾ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

1:26:18.00 ರ ಸಮಯದಲ್ಲಿ ಇರ್ಫಾನ್ ತಮ್ಮ ನಡಿಗೆಯನ್ನು ಮುಗಿಸಿದರು. ಇದು ವಿಶ್ವ ಚಾಂಪಿಯನ್ ಅರ್ಹತಾ ಮಟ್ಟ ದ ಸಮಯ 1:22:30 ಕ್ಕಿಂತ ಅಲ್ಪ ಕಡಿಮೆಯಾಗಿದೆ. ಹರ್ಯಾಣದ ದೇವೇಂದರ್ ಸಿಂಗ್ ಹಾಗೂ ಸಂದೀಪ್‌ಕುಮಾರ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಮಹಿಳಾ ವಿಭಾಗದಲ್ಲಿ ಕೇರಳದವರೇ ಆದ ಬಿ.ಸೌಮ್ಯಾ 1:40:25.00 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಉತ್ತರಪ್ರದೇಶದ ಪ್ರಿಯಾಂಕಾ ಹಾಗೂ ಹರ್ಯಾಣದ ರವೀನಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಪ್ರಶಸ್ತಿ ವಿಜೇತರಿಗೆ 50,000, ರನ್ನರ್‌ಅಪ್‌ಗೆ 30,000 ಹಾಗೂ ಕಂಚು ಪದಕ ವಿಜೇತರಿಗೆ 20,000 ನಗದು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾರತ, ಚೈನೀಸ್ ತೈಪೆ ಹಾಗೂ ಮಲೇಶ್ಯದ ಒಟ್ಟು 86 ಅಥ್ಲೀಟ್‌ಗಳು ಭಾಗವಹಿಸಿದ್ದಾರೆ. 2019ರ ಮಾ.17ರಲ್ಲಿ ನಡೆಯುವ ಏಶ್ಯನ್ ನಡಿಗೆ ಚಾಂಪಿಯನ್‌ಶಿಪ್‌ಗೆ ಸ್ಪರ್ಧಿಗಳ ಆಯ್ಕೆಯ ಟ್ರಯಲ್ ಆಗಿ ಈ ಸ್ಪರ್ಧೆ ನಡೆಯುತ್ತಿದೆ. ಪುರುಷರಿಗಾಗಿ 50 ಕಿ.ಮೀ ಸ್ಪರ್ಧೆ ಹಾಗೂ ಬಾಲಕ ಮತ್ತು ಬಾಲಕಿಯರಿಗಾಗಿ 10 ಕಿ.ಮೀ ಸ್ಪರ್ಧೆಯು ರವಿವಾರ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News