ಹಾಲೆಪ್ ಫೈನಲ್‌ಗೆ; ಮೆರ್ಟೆನ್ಸ್ ಎದುರಾಳಿ

Update: 2019-02-16 18:17 GMT

ದೋಹಾ,ಫೆ.16: ಮತ್ತೊಂದು ಮರು ಹೋರಾಟ ಸಂಘಟಿಸಿದ ರೊಮೇನಿಯದ ಆಟಗಾರ್ತಿ ಸಿಮೊನಾ ಹಾಲೆಪ್ ಉಕ್ರೇನ್‌ನ ಎಲಿನಾ ಸ್ವಿಟೋಲಿನಾರನ್ನು ಸೋಲಿಸಿ ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಹಾಲೆಪ್ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾರನ್ನು 6-3, 3-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಸ್ವಿಟೋಲಿನಾ ಅವರು ಹಾಲೆಪ್ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 4-2 ಮುನ್ನಡೆ ಹೊಂದಿದ್ದಾರೆ. ಈ ಋತುವಿನಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ್ದ ಸ್ವಿಟೋಲಿನಾ ಅವರು ಕಳೆದ ವರ್ಷ ರೋಮ್‌ನಲ್ಲಿ ನಡೆದ ಫೈನಲ್ ಸೇರಿದಂತೆ ಕಳೆದ ಮೂರು ಪಂದ್ಯಗಳಲ್ಲಿ ಹಾಲೆಪ್ ಎದುರು ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಡಬ್ಲುಟಿಎ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿರುವ ಸ್ವಿಟೋಲಿನಾ ಓರ್ವ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ್ತಿಯಾಗಿದ್ದಾರೆ. ಸ್ವಿಟೋಲಿನಾ 2017ರಲ್ಲಿ 5 ಪ್ರಶಸ್ತಿಗಳನ್ನು ಜಯಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದರು. ಕಳೆದ ವರ್ಷ 4 ಪ್ರಶಸ್ತಿಗಳನ್ನು ಜಯಿಸಿದ್ದರು. ಇಲ್ಲಿನ ಖಲಿಫಾ ಇಂಟರ್‌ನ್ಯಾಶನಲ್ ಕಾಂಪ್ಲೆಕ್ಸ್‌ನಲ್ಲಿ 27ರ ಹರೆಯದ ಹಾಲೆಪ್ ಮೊದಲ ಸೆಟನ್ನು ಸುಲಭವಾಗಿ ಜಯಿಸಿದರು. ಆದರೆ, 2ನೇ ಸೆಟನ್ನು ಕೈಚೆಲ್ಲಿದರು. ಮೂರನೇ ಸೆಟ್‌ನಲ್ಲಿ 6-4 ಅಂತರದ ಜಯ ಸಾಧಿಸಿ ಪಂದ್ಯವನ್ನು ಗೆದ್ದಾಗ ವಿಪರೀತ ಚಳಿಯಲ್ಲೂ ಪಂದ್ಯ ವೀಕ್ಷಿಸಲು ಬಂದಿದ್ದ ಹಾಲೆಪ್ ಅಭಿಮಾನಿಗಳು ಖುಷಿಪಟ್ಟರು.

ಹಾಲೆಪ್ ಶನಿವಾರ ತಡರಾತ್ರಿ ನಡೆಯುವ ಫೈನಲ್‌ನಲ್ಲಿ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ರನ್ನು ಎದುರಿಸಲಿದ್ದಾರೆ. ಮೆರ್ಟೆನ್ಸ್ ಮತ್ತೊಂದು ಸೆಮಿ ಫೈನಲ್‌ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ರನ್ನು 6-4, 2-6, 6-1 ಸೆಟ್‌ಗಳಿಂದ ಮಣಿಸುವುದರೊಂದಿಗೆ ಶಾಕ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News