ಮೆರ್ಟೆನ್ಸ್ ಮಡಿಲಿಗೆ ಖತರ್ ಓಪನ್ ಪ್ರಶಸ್ತಿ

Update: 2019-02-17 18:11 GMT

ಈ ಗೆಲುವು ನನ್ನ ಜೀವನದ ಮಹಾನ್ ಕ್ಷಣ. ಪಂದ್ಯದಲ್ಲಿ ನಾನು ಸ್ವಲ್ಪ ಅಧೀರಳಾಗಿದ್ದೆ. ಆ ಬಳಿಕ ಆಕ್ರಮಣಕಾರಿಯಾಗಿ ಆಟದ ವೇಗವನ್ನು ಹೆಚ್ಚಿಸಿದ ಕಾರಣ ಪಂದ್ಯವನ್ನು ನನ್ನ ಕಡೆಗೆ ತಿರುಗಿಸಿಕೊಳ್ಳಲು ಸಾಧ್ಯವಾಯಿತು.

►ಎಲಿಸ್ ಮೆರ್ಟೆನ್ಸ್, ಖತರ್ ಪ್ರಶಸ್ತಿ ವಿಜೇತೆ.

ದೋಹಾ, ಫೆ.17: ಆರಂಭಿಕ ಸೆಟ್‌ನ ಹಿನ್ನಡೆಯನ್ನು ಮೆಟ್ಟಿನಿಂತ ಬೆಲ್ಝಿಯಂ ಟೆನಿಸ್ ತಾರೆ ಎಲಿಸ್ ಮೆರ್ಟೆನ್ಸ್ ವಿಶ್ವದ ನಂ.3 ತಾರೆ ಸಿಮೊನಾ ಹಾಲೆಪ್‌ಗೆ ಸೋಲುಣಿಸುವ ಮೂಲಕ ಜೀವಮಾನದ ಶ್ರೇಷ್ಠ ಗೆಲುವು ದಾಖಲು ಮಾಡಿದ್ದಾರೆ. ಆ ಮೂಲಕ ಶನಿವಾರ ರಾತ್ರಿ ಖತರ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.3ನೇ ಸ್ಥಾನದಲ್ಲಿರುವ ಮೆರ್ಟೆನ್ಸ್, ರೋಮಾನಿಯದ ಬಲಿಷ್ಠ ಎದುರಾಳಿಯ ವಿರುದ್ಧ 3-6, 6-4, 6-3 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಬೆನ್ನು ನೋವಿನ ಕಾರಣ 8 ನಿಮಿಷಗಳ ವೈದ್ಯಕೀಯ ವಿರಾಮ ಪಡೆದ ಬಳಿಕ ಪುಟಿದೆದ್ದ ಅವರು ಎದುರಾಳಿಯನ್ನು ಮಣ್ಣುಮುಕ್ಕಿಸುವಲ್ಲಿ ತಪ್ಪು ಮಾಡಲಿಲ್ಲ. ಒಂದು ಹಂತದಲ್ಲಿ ಸತತ 18 ಅಂಕಗಳನ್ನು ಕಳೆದುಕೊಂಡರೂ ಅವರು ಎದೆಗುಂದಲಿಲ್ಲ.

ಮೆರ್ಟೆನ್ಸ್ ಪಂದ್ಯವನ್ನು ಮೊದಲ ಸೆಟ್‌ನಲ್ಲಿ ಸೋಲುವ ಮೂಲಕ ಅಧೀರತೆಯಿಂದ ಆರಂಭಿಸಿದರು. ಈ ಸೆಟ್‌ನ್ನು ಕೇವಲ 32 ನಿಮಿಷಗಳ ಅಂತರದಲ್ಲಿ ಹಾಲೆಪ್‌ಗೆ ಒಪ್ಪಿಸಿದರು. ಎರಡನೇ ಸೆಟ್‌ನಲ್ಲಿ ಹಾಲೆಪ್ 2-0 ಮುನ್ನಡೆಯಲ್ಲಿದ್ದಾಗ ಸುಲಭ ಜಯ ಸಾಧಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆ ಬಳಿಕ ಹಾಲೆಪ್‌ರ ಸರ್ವ್ ಮುರಿದ ಮೆರ್ಟೆನ್ಸ್ ಪಂದ್ಯದಲ್ಲಿ ವಿರಾಮ ಪಡೆದರು. ಆ ಬಳಿಕದ ಆಟದಲ್ಲಿ ಅವರು ಸಂಪೂರ್ಣ ಪ್ರಾಬಲ್ಯ ಮೆರೆದರು. ದೋಹಾದಲ್ಲಿ ದೊರೆತ ಈ ಗೆಲುವಿನ ಹಿನ್ನೆಲೆಯಲ್ಲಿ ಮುಂದೆ ಪ್ರಟವಾಗುವ ರ್ಯಾಂಕಿಂಗ್‌ನಲ್ಲಿ ಮೆರ್ಟೆನ್ಸ್ 16ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.

2 ತಾಸುಗಳಿಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಮೆರ್ಟೆನ್ಸ್‌ರ ಈ ಗೆಲುವು ಈ ವಾರ ದೋಹಾದಲ್ಲಿ ಅಗ್ರ 10ರ ಶ್ರೇಯಾಂಕದೊಳಗಿನ ಆಟಗಾರ್ತಿಯ ವಿರುದ್ಧ ಪಡೆದ ಮೂರನೇ ಗೆಲುವಾಗಿದೆ. ಗ್ರಾನ್‌ಸ್ಲಾಮ್ ಚಾಂಪಿಯನ್ ಓರ್ವರ ವಿರುದ್ಧದ ಎರಡನೇ ಜಯವಾಗಿದೆ.

ಖತರ್ ಓಪನ್ ಮೆರ್ಟೆನ್ಸ್ ಗೆದ್ದ 5ನೇ ಪ್ರಶಸ್ತಿಯಾದರೆ ಪ್ರಮುಖ ಟೂರ್ನಿಯೊಂದರ ಮೊದಲ ಕಿರೀಟವಾಗಿದೆ.

ನಾನು ಈ ಮಹಾನ್ ಪಂದ್ಯ ಗೆಲ್ಲುವ ಸಾಧ್ಯತೆ ಪ್ರತಿಶತವಾಗಿತ್ತು. ಮೂರನೇ ಸೆಟ್‌ನಲ್ಲಿ ನಾನು ತುಂಬಾ ದಣಿದಿದ್ದೆ. ಮೆರ್ಟೆನ್ಸ್ ಉತ್ತಮವಾಗಿ ಆಡಿದರು. ಅವಳು ಬಲಿಷ್ಠೆ, ಉತ್ಸಾಹಿ ಆಟಗಾರ್ತಿ.

►ಸಿಮೊನಾ ಹಾಲೆಪ್, ರನ್ನರ್‌ಅಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News