ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಿಂದ ಕ್ರಿಸ್ ಗೇಲ್ ನಿವೃತ್ತಿ

Update: 2019-02-18 11:50 GMT

ಮುಂಬೈ,ಫೆ.18:ವೆಸ್ಟ್‌ಇಂಡೀಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೇ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್‌ನ ಬಳಿಕ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ.

ಬಾರ್ಬಡೊಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ರವಿವಾರ ಅಭ್ಯಾಸ ಆರಂಭಿಸುವ ಮೊದಲು 39ರ ಹರೆಯದ ಎಡಗೈ ದಾಂಡಿಗ ಗೇಲ್ ಟ್ವಿಟರ್‌ನ ಮೂಲಕ ತನ್ನ ನಿವೃತ್ತಿಯ ಘೋಷಣೆ ಮಾಡಿದರು. ಗೇಲ್ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಆಡಲಿದ್ದಾರೆ.

ಜಮೈಕಾ ದಾಂಡಿಗ ಗೇಲ್ ಈತನಕ 284 ಏಕದಿನ ಪಂದ್ಯಗಳನ್ನು ಆಡಿದ್ದು, 37.12ರ ಸರಾಸರಿಯಲ್ಲಿ 23 ಶತಕ ಹಾಗೂ 49 ಅರ್ಧಶತಕಗಳ ಸಹಿತ ಒಟ್ಟು 9,727 ರನ್ ಕಲೆ ಹಾಕಿದ್ದಾರೆ.

 2015ರ ವಿಶ್ವಕಪ್‌ನಲ್ಲಿ ಝಿಂಬಾಬ್ವೆ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ 215 ಗಳಿಸಿದ್ದರು. ಇದು ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ದ್ವಿಶತಕವಾಗಿದೆ. ಆ ಪಂದ್ಯದಲ್ಲಿ ಗೇಲ್ ಮರ್ಲಾನ್ ಸ್ಯಾಮುಯೆಲ್ಸ್‌ರೊಂದಿಗೆ 372 ರನ್ ಜೊತೆಯಾಟ ನಡೆಸಿದ್ದರು. ಇದು ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಜೊತೆಯಾಟವಾಗಿದೆ.

ಗೇಲ್ ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನದಲ್ಲಿ ದ್ವಿಶತಕ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಏಕೈಕ ಆಟಗಾರ. ‘ಯುನಿವರ್ಸ್ ಬಾಸ್’ ಎಂದೇ ಖ್ಯಾತಿ ಪಡೆದಿರುವ ಗೇಲ್ ಈ ತನಕ 103 ಟೆಸ್ಟ್ ಹಾಗೂ 56 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

ಗೇಲ್ 2006ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು, ಆ ಟೂರ್ನಿಯಲ್ಲಿ 3 ಶತಕಗಳ ಸಹಿತ ಒಟ್ಟು 474 ರನ್ ಗಳಿಸಿದ್ದರು. ಒಟ್ಟು 8 ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News