ಪಿಎಸ್‌ಎಲ್ ಪ್ರಸಾರ ಜವಾಬ್ದಾರಿಯಿಂದ ಹಿಂದೆ ಸರಿದ ಐಎಂಜಿ ರಿಲಯನ್ಸ್
ಕೋಲ್ಕತಾ, ಫೆ.18: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಭಾರತದ 40 ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಭಾಗವಾಗಿ ಐಎಂಜಿ ರಿಲಯನ್ಸ್, ಪಾಕಿಸ್ತಾನ ಸೂಪರ್ ಲೀಗ್(ಐಎಸ್‌ಎಲ್)ಪ್ರಸಾರ ಜವಾಬ್ದಾರಿಯಿಂದ ಹಿಂದೆ ಸರಿದಿದೆ.
‘‘ಕಳೆದ ಕೆಲವು ದಿನಗಳ ಹಿಂದೆ ನಡೆದ ದುರಾದೃಷ್ಟಕರ ಘಟನೆಯಲ್ಲಿ ಭಾರತೀಯ ಯೋಧರು ಮೃತಪಟ್ಟಿದ್ದರು. ಈ ಘಟನೆ ನಮಗೆ ತುಂಬಾ ನೋವುಂಟು ಮಾಡಿದೆ. ಪಿಎಸ್‌ಎಲ್ ಟೂರ್ನಿಯ ಸಂಪೂರ್ಣ ಪ್ರಸಾರದ ಜವಾಬ್ದಾರಿಯಿಂದ ನಾವು ಮುಕ್ತವಾಗುತ್ತಿದ್ದೇವೆ. ಟೂರ್ನಿಯ ನಿರ್ಮಾಣದಿಂದ ಹೊರ ಬರಲಾಗಿದೆ’’ ಎಂದು ಐಎಂಜಿ ತಿಳಿಸಿದೆ.
ಐಎಂಜಿ ನಿರ್ಧಾರದಿಂದ ಹತಾಶೆಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿಗೆ ದೂರು ನೀಡುವುದಾಗಿ ತಿಳಿಸಿದೆ. ರಾಜಕೀಯ ಹಾಗೂ ಕ್ರೀಡೆಯನ್ನು ಒಂದೇ ತಕ್ಕಡಿ ಯಲ್ಲಿ ತೂಗಬಾರದು ಎಂದಿದೆ.
ನಾಲ್ಕನೇ ಆವೃತ್ತಿಯ ಪಿಎಸ್‌ಎಲ್ ಗುರುವಾರ ದುಬೈನಲ್ಲಿ ಆರಂಭವಾಗಿದೆ. 6 ತಂಡಗಳು ಭಾಗವಹಿಸುತ್ತಿರುವ ಟೂರ್ನಮೆಂಟ್ ದುಬೈ ಹಾಗೂ ಶಾರ್ಜಾದಲ್ಲಿ ನಡೆಯಲಿದೆ. ಕರಾಚಿಯಲ್ಲಿ ನಡೆಯುವ ಫೈನಲ್ ಪಂದ್ಯ ಸಹಿತ ಕೊನೆಯ 8 ಪಂದ್ಯಗಳು ಪಾಕ್‌ನಲ್ಲಿ ನಡೆಯುತ್ತದೆ.