ಅಗ್ರಸ್ಥಾನದಲ್ಲಿ ಸ್ಮತಿ ಮಂಧಾನಾ ಸ್ಥಿರ

Update: 2019-02-18 18:05 GMT

►5ನೇ ಸ್ಥಾನದಲ್ಲಿ ಮಿಥಾಲಿ ರಾಜ್

ದುಬೈ, ಫೆ.18: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನಾ ಸೋಮವಾರ ನೂತನವಾಗಿ ಪ್ರಕಟವಾಗಿರುವ ಐಸಿಸಿ ಏಕದಿನ ರ್ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲ್ಲಿ ಅಗ್ರಸ್ಥಾನ ಕಾಯ್ದು ಕೊಂಡಿದ್ದಾರೆ. ಇದೇ ವೇಳೆ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಒಟ್ಟು 774 ರೇಟಿಂಗ್ ಅಂಕಗಳನ್ನು ಹೊಂದಿರುವ ಸ್ಮತಿ ಆಸ್ಟ್ರೇಲಿಯ ಜೋಡಿ ಎಲ್ಲಿಸ್ ಪೆರ್ರಿ ಹಾಗೂ ಮೆಗ್ ಲ್ಯಾನ್ನಿಂಗ್ ಅವರಿಗಿಂತ ಮುಂದಿದ್ದಾರೆ. ನ್ಯೂಝಿಲೆಂಡ್ ಆ್ಯಮಿ ಸಟ್ಟರ್ಥ್‌ವೈಟ್ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಅಗ್ರ 20ರೊಳಗೆ ಸ್ಥಾನ ಸಂಪಾದಿಸಿದ ಇತರ ಭಾರತೀಯ ಆಟಗಾರ್ತಿಯರೆಂದರೆ ದೀಪ್ತಿ ಶರ್ಮಾ(17) ಹಾಗೂ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್(19).

ವೆಸ್ಟ್ ಇಂಡೀಸ್ ತಂಡದ ನಾಯಕಿ ಸ್ಟೆಫಾನಿ ಟೇಲರ್ 2 ಸ್ಥಾನ ಭಡ್ತಿ ಪಡೆದು ಬ್ಯಾಟ್ಸ್ ವುಮನ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಆಯಾ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ ಸರಣಿಗಳಲ್ಲಿ ಜಯಗಳಿಸಿದ ಬಳಿಕ ಪಾಕಿಸ್ತಾನ ಹಾಗೂ ದ.ಆಫ್ರಿಕದ ಹಲವು ಆಟಗಾರ್ತಿಯರು ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜುಲನ್ ಗೋಸ್ವಾಮಿ(3) ಗರಿಷ್ಠ ರ್ಯಾಂಕ್‌ನಲ್ಲಿರುವ ಭಾರತದ ಆಟಗಾರ್ತಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯದ ಮೆಗನ್ ಸ್ಕಟ್ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಸನಾ ಮಿರ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಕ್ರಮವಾಗಿ 8 ಹಾಗೂ 9ನೇ ಸ್ಥಾನದಲ್ಲಿರುವ ದೀಪ್ತಿ ಶರ್ಮಾ ಹಾಗೂ ಪೂನಮ್ ಯಾದವ್ ಅಗ್ರ 10ರ ಪಟ್ಟಿಯಲ್ಲಿರುವ ಭಾರತೀಯ ಬೌಲರ್‌ಗಳು. ಆಲ್‌ರೌಂಡರ್ ಪಟ್ಟಿಯಲ್ಲಿ ಜೀವನಶ್ರೇಷ್ಠ ಮೂರನೇ ಸ್ಥಾನ ತಲುಪಿದ ಸಾಧನೆಯನ್ನು ದೀಪ್ತಿ ಶರ್ಮಾ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News