ಶೂಟಿಂಗ್ ವಿಶ್ವಕಪ್‌: ಪಾಕ್ ಶೂಟರ್‌ಗಳಿಗೆ ವೀಸಾ

Update: 2019-02-18 18:13 GMT

ಹೊಸದಿಲ್ಲಿ, ಫೆ.18: ಈ ತಿಂಗಳಾಂತ್ಯದಲ್ಲಿ ದಿಲ್ಲಿಯಲ್ಲಿ ನಿಗದಿಯಾಗಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲಾಗಿದೆ ಎಂದು ಭಾರತದ ಶೂಟಿಂಗ್‌ನ ಉನ್ನತಾಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದು, ಪುಲ್ವಾಮ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಶೂಟರ್‌ಗಳು ಟೂರ್ನಿಯಲ್ಲಿ ಭಾಗವಹಿಸುವ ಕುರಿತಂತೆ ಇದ್ದ ಊಹಾಪೋಹಕ್ಕೆ ತೆರೆ ಬಿದ್ದಿದೆ.

ಶೂಟಿಂಗ್ ವಿಶ್ವಕಪ್ ಫೆ.20ರಿಂದ 28ರ ತನಕ ಹೊಸದಿಲ್ಲಿಯ ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆಯಲಿದೆ. ಟೋಕಿಯೊ 2020ರ ಒಲಿಂಪಿಕ್ಸ್‌ಗೆ 16 ಕೋಟಾ ಸ್ಥಾನಗಳು ವಿಶ್ವಕಪ್ ವೇಳೆಯೇ ಭರ್ತಿಯಾಗುವ ಹಿನ್ನೆಲೆಯಲ್ಲಿ ಈ ಟೂರ್ನಿಯು ಮಹತ್ವ ಪಡೆದಿದೆ.

‘‘ಪಾಕ್ ಶೂಟರ್‌ಗಳ ವೀಸಾ ತೆರವುಗೊಳಿಸಲಾಗಿದೆ. ಭಾರತೀಯ ಹೈಕಮಿಶನ್ ಹಾಗೂ ಪಾಕಿಸ್ತಾನ ಶೂಟಿಂಗ್ ಫೆಡರೇಶನ್‌ನಿಂದ ನಾವು ಮಾಹಿತಿ ಪಡೆದಿದ್ದೇವೆ. ಇಬ್ಬರು ಶೂಟರ್‌ಗಳು ಹಾಗೂ ಮ್ಯಾನೇಜರ್‌ರ ವಿಮಾನ ಟಿಕೆಟ್ ಕೂಡ ಬುಕ್ ಆಗಿದೆ’’ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆಯ(ಎನ್‌ಆರ್‌ಎಐ)ಕಾರ್ಯದರ್ಶಿ ರಾಜೀವ್ ಭಾಟಿಯಾ ಸೋಮವಾರ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಪಾಕ್‌ನ ಉಗ್ರ ಸಂಘಟನೆ ದಾಳಿ ನಡೆಸಿ ಭಾರತದ 40 ಯೋಧರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಕ್ ಶೂಟರ್‌ಗಳು ಭಾಗವಹಿಸುವ ಬಗ್ಗೆ ಸಂಶಯವಿತ್ತು. ಇಂದು ಸಂಜೆ ಭಾರತ ವೀಸಾ ಕಳುಹಿಸದಿದ್ದರೆ, ನಮ್ಮ ಶೂಟರ್‌ಗಳನ್ನು ವಿಶ್ವಕಪ್‌ಗೆ ಕಳುಹಿಸಿಕೊಡುವುದಿಲ್ಲ ಎಂದು ಪಾಕ್ ಶೂಟಿಂಗ್ ಫೆಡರೇಶನ್ ಕರಾಚಿಯಲ್ಲಿ ಹೇಳಿಕೆ ನೀಡಿತ್ತು.

ಭಾರತ ಸರಕಾರ ಗುರುವಾರ ಉಗ್ರ ದಾಳಿ ನಡೆಯುವ ಮುನ್ನಾದಿನ ಪಾಕ್ ಶೂಟರ್‌ಗಳಿಗೆ ವೀಸಾ ಕಳುಹಿಸಲು ಸಮ್ಮತಿ ನೀಡಿತ್ತು. ‘‘ವಿಶ್ವಕಪ್‌ನ ರ್ಯಾಪಿಡ್ ಫೈಯರ್ ವಿಭಾಗದಲ್ಲಿ ಸ್ಪರ್ಧಿಸುವ ಇಬ್ಬರು ಶೂಟರ್‌ಗಳಾದ ಜಿಎಂ ಬಶೀರ್ ಹಾಗೂ ಖಲೀಲ್ ಅಹ್ಮದ್‌ಗಾಗಿ ಪಾಕ್ ವೀಸಾಕ್ಕಾಗಿ ಅರ್ಜಿ ಸಲ್ಲಿಸಿತ್ತು. ಕೋಚ್ ಹಾಗೂ ಪಾಕ್‌ನ ಇಬ್ಬರು ರೈಫಲ್ ಶೂಟರ್‌ಗಳು ಫೆ.20 ರಂದು ಭಾರತಕ್ಕೆ ಬರುವ ನಿರೀಕ್ಷೆಯಿದೆ’’ಎಂದು ಭಾಟಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News