‘ಸ್ಕ್ವಾಷ್ ರಾಣಿ’ ನಿಕೋಲ್ ವರ್ಷಾಂತ್ಯದಲ್ಲಿ ನಿವೃತ್ತಿ

Update: 2019-02-19 18:02 GMT

ಕೌಲಾಲಂಪುರ, ಫೆ.19: ಎಂಟು ಬಾರಿಯ ವಿಶ್ವ ಮಹಿಳಾ ಸ್ಕ್ವಾಷ್ ಚಾಂಪಿಯನ್ ಮಲೇಶ್ಯದ ನಿಕೋಲ್ ಡೇವಿಡ್ 2018-19ರ ಸ್ಕ್ವಾಷ್ ಋತುವಿನ ಅಂತ್ಯಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ.

35 ವರ್ಷದ ಅತ್ಯಂತ ಯಶಸ್ವಿ ಮಹಿಳಾ ಆಟಗಾರ್ತಿಯಾಗಿರುವ ನಿಕೋಲ್ 2006-2015ರ ಅವಧಿಯಲ್ಲಿ 9 ವರ್ಷಗಳ ಕಾಲ ವಿಶ್ವ ಸ್ಕ್ವಾಷ್‌ನಲ್ಲಿ ನಂ.1 ಆಗಿದ್ದವರು. ಇದೊಂದು ದೀರ್ಘ ಮತ್ತು ಕಠಿಣ ದಿನ ಎಂದು ಅವರು ಬಣ್ಣಿಸಿದ್ದಾರೆ. ‘‘ಈ ನಿರ್ಧಾರ ತೆಗೆದುಕೊಳ್ಳಬೇಕೆಂದು ಹಲವು ದಿನಗಳಿಂದ ಯೋಚಿಸಿದ್ದೆ ಮತ್ತು ಇದು ನನ್ನ ಕೊನೆಯ ಋತು ಎಂದು ತಿಳಿದಿದ್ದೇನೆ’’ ಎಂದು ಕ್ರೀಡಾ ಆಡಳಿತ ಮಂಡಳಿಯ ವೃತ್ತಿಪರ ಸ್ಕ್ವಾಷ್ ಸಂಸ್ಥೆಯ ವೆಬ್‌ಸೈಟ್‌ಗೆ ನೀಡಿದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಮಲೇಶ್ಯ ಕ್ರೀಡಾಭಿಮಾನಿಗಳ ಮೆಚ್ಚಿನ ಆಟಗಾರ್ತಿಯಾಗಿರುವ ನಿಕೋಲ್ 5 ಬಾರಿ ಬ್ರಿಟಿಷ್ ಓಪನ್ ಪ್ರಶಸ್ತಿ, 2 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಬಂಗಾರದ ಪದಕ, 5 ಬಾರಿ ಏಶ್ಯನ್ ಗೇಮ್ಸ್ ಚಿನ್ನದ ಪದಕ ಹಾಗೂ ಮೂರು ಬಾರಿ ವಿಶ್ವ ಗೇಮ್ಸ್‌ನಲ್ಲಿ ಬಂಗಾರದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಸುಮಾರು 2 ದಶಕಗಳನ್ನು ಅವರು ಸ್ಕ್ವಾಷ್‌ಗಾಗಿ ಮುಡಿಪಾಗಿಟ್ಟಿದ್ದಾರೆ.

2015ರ ಸೆಪ್ಟಂಬರ್‌ನಲ್ಲಿ ಅವರು ವಿಶ್ವ ನಂ.1 ರ್ಯಾಂಕಿಂಗ್‌ನಿಂದ ಕೆಳಗಿಳಿದಿದ್ದರು. ಆದರೆ ದಾಖಲೆಗಳನ್ನು ಮುರಿಯುತ್ತಲೇ ಸಾಗಿದ್ದ ಅವರು 143 ತಿಂಗಳುಗಳ ಕಾಲ ಪಿಎಸ್‌ಎ ರ್ಯಾಂಕಿಂಗ್‌ನಲ್ಲಿ ಅಗ್ರ 5ರ ಪಟ್ಟಿಯಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News