×
Ad

ಶೂಟಿಂಗ್ ವಿಶ್ವಕಪ್‌: ಪಾಕ್ ಶೂಟರ್‌ಗಳು ಅಲಭ್ಯ

Update: 2019-02-19 23:53 IST

ಹೊಸದಿಲ್ಲಿ, ಫೆ.19: ಪುಲ್ವಾಮದಲ್ಲಿ ಉಗ್ರನಿಂದ ಪೈಶಾಚಿಕ ದಾಳಿ ನಡೆದ ಬಳಿಕ ಭಾರತ-ಪಾಕ್‌ನ ಕ್ರೀಡೆಯಲ್ಲೂ ಮೊದಲ ಬಲಿಯಾಗಿದೆ. ಪಾಕ್‌ನ ಇಬ್ಬರು ಶೂಟರ್‌ಗಳಾದ ಮುಹಮ್ಮದ್ ಖಲೀಲ್ ಅಖ್ತರ್ ಹಾಗೂ ಗುಲಾಂ ಮುಸ್ತಾಫ ಬಶೀರ್ ಹಾಗೂ ಅವರ ಕೋಚ್ ರಝಿ ಅಹ್ಮದ್ ಫೆ.20ರಿಂದ 28ರ ತನಕ ಭಾರತದಲ್ಲಿ ನಡೆಯುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ್ದಾರೆ.

ವೀಸಾ ಪಡೆಯಲು ವಿಳಂಬವಾದ ಕಾರಣ ನಮ್ಮ ಶೂಟರ್‌ಗಳು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪಾಕಿಸ್ತಾನದ ಶೂಟಿಂಗ್ ಮಂಡಳಿ(ಎನ್‌ಆರ್‌ಎಪಿ) ತಿಳಿಸಿದೆ. ಪಾಕ್ ಶೂಟರ್‌ಗಳಿಗೆ ವೀಸಾ ನೀಡಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

‘‘ಪಾಕ್ ಶೂಟರ್‌ಗಳಿಗೆ ವೀಸಾವನ್ನು ನೀಡಿರುವ ಕುರಿತು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈ ಕಮಿಶನ್‌ನಿಂದ ನಾವು(ರಾಷ್ಟ್ರೀಯ ರೈಫಲ್ ಸಂಸ್ಥೆ)ದೃಢೀಕರಣ ಸ್ವೀಕರಿಸಿದ್ದೆವು.ಅಲ್ಲಿನ ಭಾರತೀಯ ಹೈಕಮಿಶನ್‌ನಿಂದ ವೀಸಾ ಪಡೆದಿರುವ ಬಗ್ಗೆ ದೃಢೀಕರಣ ಪತ್ರ ಸ್ವೀಕರಿಸಿದ್ದಾಗಿ ಪಾಕ್ ರೈಫಲ್ ಸಂಸ್ಥೆ ಇಂದು ಮಧ್ಯಾಹ್ನ ಇ-ಮೇಲ್ ಮೂಲಕ ಖಚಿತಪಡಿಸಿದೆ’’ ಎಂದು ಭಾರತದ ರೈಫಲ್ ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಭಾಟಿಯಾ ಸೋಮವಾರ ಹೇಳಿದ್ದರು.

ವೀಸಾ ಮಂಜೂರಾಗಿದೆ ಎಂದು ಭಾರತೀಯ ಹೈಕಮಿಶನ್ ಸೋಮವಾರ ಮಧ್ಯಾಹ್ನ ನಮಗೆ ಮಾಹಿತಿ ನೀಡಿತ್ತು. ಮೂವರು ಪಾಕ್ ಸದಸ್ಯರ ವೀಸಾ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಸೋಮವಾರ ಇದನ್ನು ನೀಡಲು ಸಾಧ್ಯವಿಲ್ಲ ಎಂದು ಇಸ್ಲಾಮಾಬಾದ್‌ನ ಭಾರತೀಯ ರಾಯಭಾರಿ ಕಚೇರಿಯು ದೂರವಾಣಿ ಕರೆ ಮೂಲಕ ನಮಗೆ ಸಂಜೆ ಮಾಹಿತಿ ನೀಡಿದೆ ಎಂದು ಪಾಕ್ ಶೂಟಿಂಗ್ ಸಂಸ್ಥೆ ತಿಳಿಸಿದೆ.

ಭಾರತಕ್ಕೆ ಆಕ್ರೋಶದ ಪತ್ರವನ್ನು ಬರೆದಿರುವ ಪಾಕ್ ಶೂಟಿಂಗ್ ಸಂಸ್ಥೆ, ಇದರ ಒಂದು ಪ್ರತಿಯನ್ನು ಅಂತರ್‌ರಾಷ್ಟ್ರೀಯ ಶೂಟಿಂಗ್ ಫೆಡರೇಶನ್‌ಗೆ(ಐಎಸ್‌ಎಸ್‌ಎಫ್)ಕಳುಹಿಸಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News