ಶ್ರೀನಗರದಲ್ಲಿ ಸೌಹಾರ್ದ ಪಂದ್ಯ ಆಡಲು ಬೆಂಗಳೂರು ಒಲವು: ರಿಯಲ್ ಕಾಶ್ಮೀರ್ ಸ್ವಾಗತ

Update: 2019-02-19 18:24 GMT

ಹೊಸದಿಲ್ಲಿ, ಫೆ.19: ಐ-ಲೀಗ್‌ಗೆ ಪಾದಾರ್ಪಣೆಗೈದಿರುವ ರಿಯಲ್ ಕಾಶ್ಮೀರ್‌ಗೆ ಬೆಂಬಲ ನೀಡುವ ಉದ್ದೇಶದಿಂದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ತಂಡ ಬೆಂಗಳೂರು ಎಫ್‌ಸಿ ಶ್ರೀನಗರದಲ್ಲಿ ಸೌಹಾರ್ದ ಫುಟ್ಬಾಲ್ ಪಂದ್ಯ ಆಡಲು ಒಲವು ತೋರಿದೆ. ಪುಲ್ವಾಮದಲ್ಲಿ ಉಗ್ರ ದಾಳಿ ನಡೆದ ಹಿನ್ನೆಲೆಯಲ್ಲಿ ಭದ್ರತೆಯ ಭಯದಿಂದ ಹಾಲಿ ಚಾಂಪಿಯನ್ ಮಿನರ್ವಾ ಎಫ್‌ಸಿ ಕಾಶ್ಮೀರ ವಿರುದ್ಧ ಪಂದ್ಯ ಆಡದಿರಲು ನಿರ್ಧರಿಸಿದೆ.

ಬೆಂಗಳೂರು ಎಫ್‌ಸಿಗೆ ಕೃತಜ್ಞತೆ ಸಲ್ಲಿಸಿರುವ ರಿಯಲ್ ಕಾಶ್ಮೀರ್ ಮಾರ್ಚ್‌ಗೆ ಶ್ರೀನಗರಕ್ಕೆ ಬಂದು ಸೌಹಾರ್ದ ಪಂದ್ಯವನ್ನು ಆಡುವಂತೆ ಆಹ್ವಾನ ನೀಡಿದೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ರಿಯಲ್ ಕಾಶ್ಮೀರ್ ವಿರುದ್ಧದ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಐ-ಲೀಗ್ ಚಾಂಪಿಯನ್ ಮಿನರ್ವಾ ಸೋಮವಾರ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದೆ.

ಈ ಮಧ್ಯೆ ಬೆಂಗಳೂರು ಎಫ್‌ಸಿ ಮಾಲಕ ಪಾರ್ಥ ಜಿಂದಾಲ್ ಅವರ ಟ್ವೀಟ್ ರಿಯಲ್ ಕಾಶ್ಮೀರದ ಆಟಗಾರರರು ಹಾಗೂ ಅದರ ಅಭಿಮಾನಿಗಳ ಸ್ಫೂರ್ತಿಯನ್ನು ಹೆಚ್ಚಿಸಿದೆ.

‘‘ಪ್ರೀತಿಯ ರಿಯಲ್ ಕಾಶ್ಮೀರ ಎಫ್‌ಸಿ, ನೀವು ಯಾವುದೇ ಸಮಯದಲ್ಲ್ಲಿ ಆಹ್ವಾನ ನೀಡಿದರೂ ಶ್ರೀನಗರಕ್ಕೆ ಬಂದು ಸೌಹಾರ್ದ ಫುಟ್ಬಾಲ್ ಪಂದ್ಯ ಆಡಲು ಬೆಂಗಳೂರು ಎಫ್‌ಸಿ ಸಿದ್ಧವಿದೆ. ಇಂತಹ ಸುಂದರವಾದ ಪಂದ್ಯವನ್ನು ನಮ್ಮ ದೇಶದ ಅವಿಭಾಜ್ಯ ಅಂಗ, ನಿಮ್ಮ ಸುಂದರವಾದ ರಾಜ್ಯದಲ್ಲಿ ಹಂಚಿಕೊಳ್ಳುವ ಅವಕಾಶವನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ಜಿಂದಾಲ್ ಟ್ವೀಟ್ ಮಾಡಿದ್ದಾರೆ.

ಜಿಂದಾಲ್ ಟ್ವೀಟ್‌ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ರಿಯಲ್ ಕಾಶ್ಮೀರ್,‘‘ಪಾರ್ಥ ಜಿಂದಾಲ್ ಹಾಗೂ ಬೆಂಗಳೂರು ಎಫ್‌ಸಿಗೆ ಧನ್ಯವಾದಗಳು. ನಾವು ಹಾಗೂ ಕಾಶ್ಮೀರದ ಜನತೆ ನಿಮಗೆ ಆತಿಥ್ಯ ನೀಡಲು ತುಂಬಾ ಸಂತೋಷ ಪಡುತ್ತೇವೆ. ಮಾರ್ಚ್‌ನಲ್ಲಿ ಪಂದ್ಯ ಆಡಲು ನಿಮ್ಮನ್ನು ಆಹ್ವಾನಿಸುತ್ತೇವೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News