×
Ad

ಹುತಾತ್ಮ ಯೋಧರಿಗೆ ಚಿನ್ನದ ಪದಕ ಅರ್ಪಿಸಿದ ಅಮಿತ್ ಪಾಂಘಾಲ್

Update: 2019-02-20 23:56 IST

ಹೊಸದಿಲ್ಲಿ,ಫೆ.20: ಪ್ರತಿಷ್ಠಿತ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಗೆದ್ದ ಚಿನ್ನದ ಪದಕವನ್ನು ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಸಮರ್ಪಿಸಿದ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್, ‘‘ನಾನು ಸಶಸ್ತ್ರ ಪಡೆಗೆ ಸೇರಿದವನಾಗಿರುವ ಕಾರಣ ಘಟನೆಯಿಂದ ತುಂಬಾ ನೋವಾಗಿದೆ’’ ಎಂದರು.

 ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಮಂಗಳವಾರ ರಾತ್ರಿ ಬಲ್ಗೇರಿಯದಲ್ಲಿ ನಡೆದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಫೈನಲ್‌ನಲ್ಲಿ ಕಝಕ್‌ಸ್ತಾನದ ಟೆಮಿರಾಟಸ್ ಝುಸ್ಸುಪೊವ್‌ರನ್ನು ಮಣಿಸಿ ಸತತ ಎರಡನೇ ಬಾರಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಮಂಗಳವಾರ ಕೊನೆಗೊಂಡ ಯುರೋಪ್‌ನ ಹಳೆಯ ಬಾಕ್ಸಿಂಗ್ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಏಕೈಕ ಪುರುಷ ಬಾಕ್ಸರ್ ಅಮಿತ್. ಇಂಡಿಯನ್ ಆರ್ಮಿಯಲ್ಲಿ ನೈಬ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ 23ರ ಹರೆಯದ ಅಮಿತ್ ಬುಧವಾರ ಪಿಟಿಐ ಜೊತೆ ಮಾತನಾಡುತ್ತಾ,‘‘ನಾನು ಸ್ವತಃ ಸೇನೆಯಲ್ಲಿರುವ ಕಾರಣ ಉಗ್ರರ ದಾಳಿಯಿಂದ ನಮ್ಮ ಯೋಧರು ಹುತಾತ್ಮರಾಗಿರುವ ಘಟನೆಯಿಂದ ಹೆಚ್ಚು ನೋವಾಗಿದೆ. ಪುಲ್ವಾಮ ದಾಳಿಯಲ್ಲಿ ಜೀವ ತೆತ್ತಿರುವ ವೀರ ಯೋಧರಿಗೆ ಪದಕವನ್ನು ಅರ್ಪಿಸಲು ಬಯಸಿದ್ದೇನೆ. ನಾವು ಕಳೆದ ವಾರ ಸೋಫಿಯಾಗೆ ತೆರಳಿದ ಬಳಿಕ ಈ ಭೀಕರ ದಾಳಿ ನಡೆದ ಕಾರಣ ಟೂರ್ನಿಯುದ್ದಕ್ಕೂ ದಾಳಿಯ ಕರಾಳ ನೆನಪು ನನ್ನನ್ನು ಕಾಡುತ್ತಿತ್ತು’’ ಎಂದರು.

ಬಲ್ಗೇರಿಯದ ಸೋಫಿಯಾದಲ್ಲಿ ನಡೆದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತ ಮೂರು ಚಿನ್ನ, 1 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 7 ಪದಕಗಳನ್ನು ಜಯಿಸಿದೆ. ಮಹಿಳಾ ಬಾಕ್ಸರ್‌ಗಳ ಪೈಕಿ ನಿಖತ್ ಝರೀನ(51ಕೆಜಿ)ತಾನು ಗೆದ್ದಂತಹ ಚಿನ್ನದ ಪದಕವನ್ನು ಹುತಾತ್ಮ ಸಿಆರ್‌ಪಿಎಫ್ ಯೋಧರಿಗೆ ಅರ್ಪಿಸಿದ್ದಾರೆ.

‘‘ನಾನು ಟೂರ್ನಮೆಂಟ್‌ನ ವೇಳೆ ನನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೆ. ಪುಲ್ವಾಮಾ ದಾಳಿಗೆ ಹುತಾತ್ಮರಾದವರ ಗೌರವಕ್ಕೆ ನಾನು ಪದಕ ಗೆಲ್ಲಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದರು. ಬಲ್ಗೇರಿಯದಲ್ಲಿ ಶೀತ ವಾತಾವರಣ ಇದ್ದ ಕಾರಣ ಸರಿಯಾದ ತೂಕ ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. ಕೆಲವು ದಿನ ನಾನು ಉಪವಾಸ ಮಲಗಿ, ಮರುದಿನ ಬೆಳಗ್ಗೆ ಅಭ್ಯಾಸ ನಡೆಸುತ್ತಿದ್ದೆ. ಈ ಮೂಲಕ ಪಂದ್ಯಕ್ಕೆ ಸಜ್ಜಾಗುತ್ತಿದ್ದೆ’’ ಎಂದು ಸೋಫಿಯಾದ ಉಪ ಶೂನ್ಯ ತಾಪಮಾನದಲ್ಲಿ ತೂಕ ಕಡಿಮೆ ಮಾಡುವುದು ಕಷ್ಟ ಎನ್ನುವುದನ್ನು ಉಲ್ಲೇಖಿಸಿ ಅಮಿತ್ ಹೇಳಿದ್ದಾರೆ.

‘‘ರಶ್ಯ, ಕಝಕ್‌ಸ್ತಾನ ಹಾಗೂ ಉಕ್ರೇನ್ ಬಲಿಷ್ಠ ಬಾಕ್ಸರ್‌ಗಳನ್ನು ಕಣಕ್ಕಿಳಿಸಿದ್ದವು. ನಾನು ಫೈನಲ್‌ನಲ್ಲಿ ಎದುರಿಸಿದ್ದ ಬಾಕ್ಸರ್ ಕಳೆದ ವರ್ಷ ಏಶ್ಯನ್ ಗೇಮ್ಸ್ ನಲ್ಲಿ ಕಂಚು ಜಯಿಸಿದ್ದರು. ಭಾರತದಲ್ಲಿ ನಡೆದ ವಿಶ್ವ ಬಾಕ್ಸರ್ ಸರಣಿಯಲ್ಲಿ ಜಯ ಸಾಧಿಸಿದ್ದರು. ಇದೇ ಮೊದಲ ಬಾರಿ ಅವರನ್ನು ಎದುರಿಸಿದ್ದೆ. ಆದರೆ, ನನಗೆ ಪಂದ್ಯ ಗೆಲ್ಲುವ ವಿಶ್ವಾಸವಿತ್ತು’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News