ವಿಮೋಚನೆಗಾಗಿ ತಾಯಿ- ಮಗನ ಮ್ಯಾರಥಾನ್ !

Update: 2019-02-24 04:25 GMT

ಸಿರಿಯಾ, ಫೆ. 24: ಇದು ಪುಟ್ಟ ಮಗನನ್ನು ಕಂಕುಳಲ್ಲಿ ಕಟ್ಟಿಕೊಂಡ ಮಹಿಳೆಯ 53 ಗಂಟೆಗಳ ಸತತ ಮ್ಯಾರಥಾನ್ ನಡಿಗೆ. ವಿಮೋಚನೆಗಾಗಿ ಈ ಹರಸಾಹಸ.

ಇಂಥ ಸಾಹಸಕ್ಕೆ ಮಹಿಳೆ ಕೈಹಾಕಿದ್ದು, ಇದೇ ಮೊದಲಲ್ಲ; ಐದನೇ ಬಾರಿ. ಇಸ್ಲಾಮಿಕ್ ಸ್ಟೇಟ್‌ನಿಂದ ತಪ್ಪಿಸಿಕೊಳ್ಳುವ ಹಿಂದಿನ ನಾಲ್ಕು ಪ್ರಯತ್ನಗಳು ವಿಫಲವಾಗಿದ್ದರೂ, ಈ ದಿಟ್ಟೆ ಪ್ರಯತ್ನ ಬಿಟ್ಟಿಲ್ಲ. ಆದರೆ ಉಗ್ರಗಾಮಿಗಳ ಕೈಗೆ ಸಿಕ್ಕಿದರೆ ಸ್ಥಳದಲ್ಲೇ ಗುಂಡಿಟ್ಟು ಸಾಯಿಸುತ್ತಾರೆ ಎಂಬ ವಾಸ್ತವದ ಅರಿವಿದ್ದರೂ, ಇಂಥ ಸಾಹಸಕ್ಕೆ ಕೈಹಾಕಿದ್ದಾರೆ. !

ಕಡುಗತ್ತಲಲ್ಲಿ ಹೆಣಗಳನ್ನು ದಾಟಿಕೊಂಡು ಬಂದಿದ್ದಾರೆ. ದಣಿವಿನಿಂದ ಕಾಲುಗಳು ಸೋತಾಗ ದೂಳಿನ ಮಾರ್ಗದಲ್ಲೇ ನಿದ್ದೆ ಹೋಗಿದ್ದಾರೆ. ಈ ಮಧ್ಯೆ ದಾರಿಯುದ್ದಕ್ಕೂ ಅಳುತ್ತಿರುವ ಐದು ವರ್ಷದ ಪುಟ್ಟ ಕಂದನನ್ನು ಫರ್ಯಾಲ್ ಸಂತೈಸಿದ್ದಾರೆ. ಅಜ್ಜ- ಅಜ್ಜಿ ನಿನಗಾಗಿ ಕಾಯುತ್ತಿದ್ದಾರೆ ಎಂದು ಆತನನ್ನು ರಮಿಸಿದ್ದಾಳೆ. ಇಸ್ಲಾಮಿಕ್ ಸ್ಟೇಟ್‌ನಲ್ಲಿ ನಾಲ್ಕು ವರ್ಷಗಳ ಜೈಲುವಾಸದಿಂದ ಹೊರಬಂದು ಅಂತಿಮವಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಪುಟ್ಟ ಬಾಲಕ ತಾಯಿಯ ಮಾತನ್ನು ನಂಬುವ ಸ್ಥಿತಿಯಲ್ಲಿಲ್ಲ.

"ಆತನಿಗೆ ತೀರಾ ಭಯವಾಗಿತ್ತು. ನಾನು ಆತನ ಕೈ ಹಿಡಿದುಕೊಂಡು ನಡೆಯುತ್ತಲೇ ಇದ್ದೆ" ಎಂದು ತನ್ನ ಸಾಹಸಯಾತ್ರೆಯ ಅನುಭವವನ್ನು ಫರ್ಯಾಲ್ ಬಿಚ್ಚಿಡುತ್ತಾರೆ.

ಇರಾಕ್‌ನ ಯಝೀದಿ ಅಲ್ಪಸಂಖ್ಯಾತದ ಸಮುದಾಯಕ್ಕೆ ಸೇರಿದ ಇವರು ಖುರ್ದಿಷ್ ಭಾಷೆ ಮಾತನಾಡುತ್ತಾರೆ. ಭಯಾನಕ "ಜನಾಂಗೀಯ ಹತ್ಯೆ"ಯಿಂದ ತಪ್ಪಿಸಿಕೊಂಡು ಬಂದಿದ್ದು, 2014ರ ಆಗಸ್ಟ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಾವಿರಾರು ಮಂದಿ ಯಝೀದಿಗಳನ್ನು ಒಂದೇ ದಿನ ಅಪಹರಿಸಿದ್ದರು. ಪುರುಷನ್ನು ನಿರ್ದಯವಾಗಿ ಹತ್ಯೆ ಮಾಡಿ, ಸಾಮೂಹಿಕವಾಗಿ ಹೂತುಹಾಕಿ, ಮಹಿಳೆಯರನ್ನು ಲೈಂಗಿಕ ದಾಸ್ಯಕ್ಕೆ ತಳ್ಳಿದ್ದರು ಎಂದು ವರದಿಯಾಗಿದ್ದು, ಇಂಥ ಮೃತ್ಯುಕೂಪದಿಂದ ಈ ತಾಯಿ- ಮಗ ತಪ್ಪಿಸಿಕೊಂಡಿದ್ದಾರೆ.

ಬಂಧನದ ಅವಧಿಯಲ್ಲಿ ಫರ್ಯಾಲ್ ಆರು ಮಾಲೀಕರ ಕೈಕೆಳಗೆ ದುಡಿದಿದ್ದಾರೆ. ಆ ರಾಕ್ಷಸರು ನಮ್ಮನ್ನು ಪ್ರಾಣಿಗಳಂತೆ ನೋಡುತ್ತಿದ್ದರು ಎಂದು ಭಯಾನಕ ಅನುಭವ ಬಿಚ್ಚಿಡುತ್ತಾರೆ ಫರ್ಯಾಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News