ಮೊದಲ ಟ್ವೆಂಟಿ-20: ಆಸ್ಟ್ರೇಲಿಯಕ್ಕೆ 127 ರನ್ ಗುರಿ ನೀಡಿದ ಭಾರತ

Update: 2019-02-24 15:13 GMT

ವಿಶಾಖಪಟ್ಟಣ, ಫೆ.24: ಪ್ರವಾಸಿ ಆಸ್ಟ್ರೇಲಿಯದ ಶಿಸ್ತುಬದ್ದ ಬೌಲಿಂಗ್‌ಗೆ ಕಂಗಲಾದ ಭಾರತ ರವಿವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.

ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡದ ನಾಯಕ ಆ್ಯರೊನ್ ಫಿಂಚ್ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. 2.3 ಓವರ್‌ಗಳಲ್ಲಿ ರೋಹಿತ್ ಶರ್ಮಾ(5) ವಿಕೆಟನ್ನು ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆಯಿತು. ಆಗ ನಾಯಕ ವಿರಾಟ್ ಕೊಹ್ಲಿ(24,17 ಎಸೆತ, 3 ಬೌಂಡರಿ)ಜೊತೆ ಕೈಜೋಡಿಸಿದ ಕನ್ನಡಿಗ ಕೆ.ಎಲ್. ರಾಹುಲ್(50,36 ಎಸೆತ, 6 ಬೌಂಡರಿ, 1 ಸಿಕ್ಸರ್)2ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಸ್ಪಿನ್ನರ್ ಝಾಂಪ ಬೇರ್ಪಡಿಸಿದರು.

ಭಾರೀ ನಿರೀಕ್ಷೆ ಮೂಡಿಸಿದ್ದ ರಿಷಭ್ ಪಂತ್(3), ದಿನೇಶ್ ಕಾರ್ತಿಕ್(1), ಕೃಣಾಲ್ ಪಾಂಡ್ಯ(1)ಪೆವಿಲಿಯನ್‌ಗೆ ಪರೇಡ್ ನಡೆಸಿದರು.
ಔಟಾಗದೆ 29 ರನ್(37 ಎಸೆತ, 1 ಸಿಕ್ಸರ್)ಗಳಿಸಿದ ಎಂಎಸ್ ಧೋನಿಗೆ ಬಾಲಂಗೋಚಿಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಆಸೀಸ್ ಪರ ಕೌಲ್ಟರ್-ನೀಲ್(3-26) ಯಶಸ್ವಿ ಬೌಲರ್ ಎನಿಸಿಕೊಂಡರು.

ಭಾರತ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದ್ದು, ಲೆಗ್ ಸ್ಪಿನ್ನರ್ ಮಾಯಾಂಕ್ ಮರ್ಕಂಡೆ ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆದರು. ಶಿಖರ್ ಧವನ್ ಬದಲಿಗೆ ಕೆಎಲ್ ರಾಹುಲ್‌ಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದೇ ವೇಳೆ, ಆಸ್ಟ್ರೇಲಿಯ ಪೀಟರ್ ಹ್ಯಾಂಡ್ಸ್‌ಕಾಂಬ್‌ಗೆ ಟಿ-20 ಕ್ಯಾಪ್ ನೀಡಿತು. ಆಸೀಸ್ ನಾಲ್ವರು ವೇಗಿಗಳು, ಓರ್ವ ಸ್ಪಿನ್ನರ್‌ನ್ನು ಆಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News