×
Ad

ಶೂಟಿಂಗ್ ವಿಶ್ವಕಪ್‌: ವಿಶ್ವದಾಖಲೆಯೊಂದಿಗೆ ಸ್ವರ್ಣ ಗೆದ್ದ ಸೌರಭ್

Update: 2019-02-24 23:37 IST

ಹೊಸದಿಲ್ಲಿ, ಫೆ.24: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಎರಡನೇ ದಿನವಾದ ರವಿವಾರ 16ರ ಹರೆಯದ ಶೂಟರ್ ಸೌರಭ್ ಚೌಧರಿ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.

ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಹಿರಿಯರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಸೌರಭ್ 245.0 ಅಂಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಮೊದಲ ಸ್ಥಾನ ಪಡೆದ ಸೌರಭ್ ಚಿನ್ನದ ಪದಕ ಜಯಿಸಿ ಹೊಸ ಮೈಲುಗಲ್ಲು ತಲುಪಿದರು. ಇದೀಗ ಅವರು ಜೂನಿಯರ್ ಹಾಗೂ ಸೀನಿಯರ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಜೊತೆಗೆ ಜೂನಿಯರ್ ಹಾಗೂ ಸೀನಿಯರ್ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆಯನ್ನೂ ನಿರ್ಮಿಸಿದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.

ಶೂಟಿಂಗ್‌ನಲ್ಲಿ ಮಿಂಚುತ್ತಿರುವ ಸೌರಭ್ ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್, ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲೂ ಚಿನ್ನದ ಪದಕವನ್ನು ಜಯಿಸಿ ಗಮನ ಸೆಳೆದಿದ್ದಾರೆ.

ಕಿಕ್ಕಿರಿದು ನೆರೆದಿದ್ದ ತವರು ಪ್ರೇಕ್ಷಕರ ಬೆಂಬಲದೊಂದಿಗೆ ಆಡಿದ ಸೌರಭ್ ತಲಾ 5 ಶಾಟ್ಸ್ ಗಳ ಮೊದಲೆರಡು ಸೀರಿಸ್‌ನಲ್ಲಿ 2.6 ಅಂಕಗಳ ಮುನ್ನಡೆ ಪಡೆದರು. ಸೌರಭ್ 16 ಶಾಟ್ಸ್ ಅಂತ್ಯಕ್ಕೆ 4.8 ಅಂಕಗಳ ಮುನ್ನಡೆ ಸಾಧಿಸಿ ಅಗ್ರ ಸ್ಥಾನ ಗಳಿಸಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಾ ಸಾಗಿದಾಗ ನೆರೆದಿದ್ದ ಪ್ರೇಕ್ಷಕರು ಸಂಭ್ರಮಿಸಿದರು. ಅಂತಿಮವಾಗಿ ಎದುರಾಳಿ ಡಮಿರ್ ಮಿಕೆಕ್‌ಗಿಂತ 5.7 ಅಂಕ ಮುನ್ನಡೆಯೊಂದಿಗೆ ವಿಜಯಿಯಾದರು. ಸರ್ಬಿಯದ ಮಿಕೆಕ್ 239.3 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿ 2ನೇ ಒಲಿಂಪಿಕ್ಸ್ ಕೋಟಾವನ್ನು ಭರ್ತಿ ಮಾಡಿದರು. ಚೀನಾದ ವೀ ಪಾಂಗ್ 215.2 ಅಂಕ ಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡರು.

ಇದಕ್ಕೂ ಮೊದಲು ಸೌರಭ್ 587 ಅಂಕ ಗಳಿಸಿ ಮೊದಲ ಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶಿಸಿದರು. ಸ್ಪರ್ಧೆಯಲ್ಲಿದ್ದ ಭಾರತದ ಇತರ ಶೂಟರ್‌ಗಳಾದ ಅಭಿಷೇಕ್ ವರ್ಮಾ ಹಾಗೂ ರವಿಂದರ್ ಸಿಂಗ್ ಫೈನಲ್‌ಗೆ ತಲುಪಲು ವಿಫಲರಾದರು. ಅಭಿಷೇಕ್ ಹಾಗೂ ರವಿಂದರ್ ಅರ್ಹತಾ ಸುತ್ತಿನಲ್ಲಿ ಒಟ್ಟು 576 ಅಂಕ ಗಳಿಸಿದರು. ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಐದನೇ ಸ್ಥಾನ ಪಡೆದು ನಿರಾಸೆಗೊಳಿಸಿದರು.

ಇದೀಗ ಭಾರತ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೂರು ಮೀಸಲು ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ 10 ಮೀ. ಏರ್ ರೈಫಲ್‌ನಲ್ಲಿ ಅಪೂರ್ವಿ ಚಾಂಡೇಲಾ ಹಾಗೂ ಅಂಜುಮ್ ವೌದ್ಗಿಲ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News