×
Ad

ಭಾರತಕ್ಕೆ ಏಕದಿನ ಸರಣಿ

Update: 2019-02-25 23:39 IST

ಮುಂಬೈ, ಫೆ.25: ಸ್ಮತಿ ಮಂಧಾನಾ ಅವರ ಮತ್ತೊಂದು ನಿರ್ಣಾಯಕ ಇನಿಂಗ್ಸ್ ಹಾಗೂ ವೇಗದ ಬೌಲರ್‌ಗಳಾದ ಜುಲನ್ ಗೋಸ್ವಾಮಿ ಹಾಗೂ ಶಿಖಾ ಪಾಂಡೆ ಅವರ ಅತ್ಯುತ್ತಮ ಸ್ಪೆಲ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಮುನ್ನಡೆ ಸಾಧಿಸಿರುವ ಭಾರತ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಇನ್ನೆರಡು ಅಂಕ ಬಾಚಿಕೊಂಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಫೆ.28 ರಂದು ನಡೆಯುವ ಮೂರನೇ ಏಕದಿನದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ.

ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲ್ಲಲು 162 ರನ್ ಚೇಸಿಂಗ್‌ಗೆ ತೊಡಗಿದ ಭಾರತ 41.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆರಂಭಿಕ ಜೊತೆಗಾರ್ತಿ ಜೆಮಿಮಾ ರೊಡ್ರಿಗಸ್(0) ಖಾತೆ ತೆರೆಯುವ ಮೊದಲೇ ಔಟಾದರೂ ದೃತಿಗೆಡದ ಸ್ಮತಿ ಮಂಧಾನಾ (63 ರನ್,74ಎಸೆತ, 7 ಬೌಂಡರಿ, 1 ಸಿಕ್ಸರ್) ಪೂನಂ ರಾವತ್‌ರೊಂದಿಗೆ 2ನೇ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿದರು. ರಾವತ್ 32 ರನ್ ಗಳಿಸಿ ಔಟಾದಾಗ ಇಂಗ್ಲೆಂಡ್‌ಗೆ ಗೆಲುವಿನ ಆಸೆ ಚಿಗುರಿತು. ಆಗ ಸ್ಮತಿಯೊಂದಿಗೆ ಕೈ ಜೋಡಿಸಿದ ನಾಯಕಿ ಮಿಥಾಲಿ ರಾಜ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯ ಗೆಲ್ಲಲು 22 ರನ್ ಅಗತ್ಯವಿದ್ದಾಗ ಭಾರತ ಸ್ಮತಿ ವಿಕೆಟ್ ಕಳೆದುಕೊಂಡಿತು. ಆಗ ಮಿಥಾಲಿ(ಔಟಾಗದೆ 47, 69 ಎಸೆತ, 8 ಬೌಂಡರಿ) ಹಾಗೂ ದೀಪ್ತಿ ಶರ್ಮಾ(ಔಟಾಗದೆ 6)ಭಾರತಕ್ಕೆ ಏಳು ವಿಕೆಟ್‌ಗಳ ಸುಲಭ ಗೆಲುವು ತಂದರು. ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ಪರ ನಟಾಲಿ ಸಿವೆರ್(85,109 ಎಸೆತ,12 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ರನ್ ಗಳಿಸಿದರು. ಆಲ್‌ರೌಂಡರ್ ನಟಾಲಿ ಏಕಾಂಗಿಯಾಗಿ ಹೋರಾಟ ನೀಡಿ ಇಂಗ್ಲೆಂಡ್ 161 ರನ್ ಗಳಿಸಲು ನೆರವಾದರು.

ಭಾರತದ ಅನುಭವಿ ಬೌಲರ್‌ಗಳಾದ ಜುಲನ್ ಗೋಸ್ವಾಮಿ ಹಾಗೂ ಶಿಖಾ ಪಾಂಡೆ ಇಂಗ್ಲೆಂಡ್‌ನ ಅಗ್ರ ಸರದಿಯನ್ನು ಭೇದಿಸಿದರು. ಶಿಖಾ ತನ್ನ ಮೊದಲ ಓವರ್‌ನಲ್ಲಿ ಅಮಿ ಜೋನ್ಸ್(3) ವಿಕೆಟನ್ನು ಪಡೆದರು. ಗೋಸ್ವಾಮಿ ಬೌಲಿಂಗ್‌ನಲ್ಲಿ ಸಾರಾ ಟೇಲರ್(1) ಹಾಗೂ ನಾಯಕಿ ಹೀದರ್ ನೈಟ್(2) ಬೇಗನೆ ವಿಕೆಟ್ ಕೈಚೆಲ್ಲಿದರು.

ಮಧ್ಯಮ ಓವರ್‌ಗಳಲ್ಲಿ ಭಾರತ ತನ್ನ ಹಿಡಿತ ಕಳೆದುಕೊಂಡಾಗ ಲಾರೆನ್ ವಿನ್‌ಫೀಲ್ಡ್ (28) ಹಾಗೂ ನಟಾಲಿ 49 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಲೆಗ್ ಸ್ಪಿನ್ನರ್ ಪೂನಂ ಯಾದವ್ ಬೇರ್ಪಡಿಸಿದರು.

ಇಂಗ್ಲೆಂಡ್ ಒಂದು ಹಂತದಲ್ಲಿ 119 ರನ್‌ಗೆ 9 ವಿಕೆಟ್ ಕಳೆದುಕೊಂಡಿತ್ತು. ಆಗ ಲಭಿಸಿದ ಎಲ್ಲ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ನಟಾಲಿ, ಅಲೆಕ್ಸ್ ಹಾರ್ಟ್ಲಿ ಅವರೊಂದಿಗೆ ಕೊನೆಯ ವಿಕೆಟ್‌ನಲ್ಲಿ 42 ರನ್ ಜೊತೆಯಾಟ ನಡೆಸಿದರು.

ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದ ಗೋಸ್ವಾಮಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News