ಗುಣೇಶ್ವರನ್ ಜೀವನಶ್ರೇಷ್ಠ ಸಾಧನೆ
ಹೊಸದಿಲ್ಲಿ, ಫೆ.25: ಭಾರತದ ಖ್ಯಾತ ಟೆನಿಸ್ ತಾರೆ ಪ್ರಜ್ಞೇಶ್ ಗುಣೇಶ್ವರನ್ ಸೋಮವಾರ ನೂತನವಾಗಿ ಪ್ರಕಟವಾದ ಎಟಿಪಿ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 94ನೇ ಸ್ಥಾನ ತಲುಪಿದ ಸಾಧನೆ ಮಾಡಿದ್ದಾರೆ.
ಮತ್ತೊಂದೆಡೆ ಒಂಬತ್ತು ಅಂಕಗಳನ್ನು ಕಳೆದುಕೊಂಡಿರುವ ದೇಶದ ಇನ್ನೋರ್ವ ತಾರೆ ರಾಮ್‌ಕುಮಾರ್ ರಾಮನಾಥನ್ 137ನೇ ಸ್ಥಾನಕ್ಕೆ ಜಾರಿದ್ದರೆ, ಯುಕಿ ಭಾಂಬ್ರಿ 171ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸಾಕೇತ್ ಮೈನೇನಿ 250ನೇ ಸ್ಥಾನಕ್ಕೆ ಏರಿಕೆ ಕಂಡಿದ್ದರೆ ಶಶಿಕುಮಾರ್ ಮುಕುಂದ್ ಜೀವನಶ್ರೇಷ್ಠ 269ನೇ ರ್ಯಾಂಕಿಂಗ್ ಗಳಿಸಿದ್ದಾರೆ.
ಇನ್ನು ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಕ್ರಮವಾಗಿ 38 ಹಾಗೂ 39ನೇ ಸ್ಥಾನದಲ್ಲಿದ್ದರೆ ಹಿರಿಯ ಆಟಗಾರ ಲಿಯಾಂಡರ್ ಪೇಸ್ 2 ಸ್ಥಾನ ಏರಿಕೆ ಕಂಡು 73ನೇ ಸ್ಥಾನ ಪಡೆದಿದ್ದಾರೆ. ಅವರ ಹಿಂದೆ ಜೀವನ್ ನೆಡುಂಚೆಜಿಯಾನ್(75) ಹಾಗೂ ಪೂರವ್ ರಾಜಾ(96) ಇದ್ದಾರೆ.
ಮಹಿಳಾ ರ್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ (164) ಭಾರತದ ಅಗ್ರಸ್ಥಾನ ಹೊಂದಿರುವ ಆಟಗಾರ್ತಿಯಾಗಿ ಮುಂದುವರಿದಿದ್ದಾರೆ. ಕರ್ಮಾನ್ ಥಂಡಿ(207) ಹಾಗೂ ಪ್ರಾಂಜಲಾ ಯಾಡ್ಲಪಲ್ಲಿ(293) ಅವರನ್ನು ಹಿಂಬಾಲಿಸುತ್ತಿದ್ದಾರೆ.