×
Ad

ಟಿ-20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದ ಬುಮ್ರಾ

Update: 2019-02-25 23:48 IST

ವಿಶಾಖಪಟ್ಟಣ, ಫೆ.25: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆಸ್ಟ್ರೇಲಿಯ ವಿರುದ್ಧ ವಿಝಾಗ್‌ನಲ್ಲಿ ರವಿವಾರ ನಡೆದ ಮೊದಲ ಅಂತರ್‌ರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ವಿಕೆಟನ್ನು ಪಡೆದ ಬುಮ್ರಾ ವಿಕೆಟ್ ಗಳಿಕೆಯಲ್ಲಿ ಅರ್ಧಶತಕ ಪೂರೈಸಿದರು.

ಬುಮ್ರಾ ತಾನೆಸೆದ 4ನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು. ಬುಮ್ರಾ ಎಸೆತವನ್ನು ಕೆಣಕಲು ಹೋದ ಹ್ಯಾಂಡ್ಸ್‌ಕಾಂಬ್ ವಿಕೆಟ್‌ಕೀಪರ್ ಎಂಎಸ್ ಧೋನಿಗೆ ಸುಲಭ ಕ್ಯಾಚ್ ನೀಡಿದರು. ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್‌ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಬುಮ್ರಾ 49ನೇ ವಿಕೆಟನ್ನು ಪಡೆದಿದ್ದರು. ಬುಮ್ರಾ ಟಿ-20 ಕ್ರಿಕೆಟ್‌ನಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(52 ವಿಕೆಟ್)ಬಳಿಕ 50 ವಿಕೆಟ್ ಪಡೆದ ಭಾರತದ ಎರಡನೇ ಹಾಗೂ ವಿಶ್ವದ 26ನೇ ಬೌಲರ್ ಎನಿಸಿಕೊಂಡರು. ಪಾಕ್‌ನ ಮಾಜಿ ಸ್ಪಿನ್ನರ್ ಶಾಹಿದ್ ಅಫ್ರಿದಿ ಒಟ್ಟು 98 ವಿಕೆಟ್‌ಗಳನ್ನು ಪಡೆದು ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದ ಮೊದಲಿಗನಾಗಿದ್ದಾರೆ. ಬುಮ್ರಾ ಆಸೀಸ್ ವಿರುದ್ಧ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಆದಾಗ್ಯೂ ಕಡಿಮೆ ಸ್ಕೋರ್ ಗಳಿಸಿದ್ದ ಭಾರತ 3 ವಿಕೆಟ್‌ಗಳ ಸೋಲನುಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News