×
Ad

ಕರ್ನಾಟಕಕ್ಕೆ ಸತತ 4ನೇ ಜಯ

Update: 2019-02-25 23:57 IST

► ಮಿಝೋರಾಂಗೆ ಹೀನಾಯ ಸೋಲು

ಕಟಕ್, ಫೆ.25: ಸಂಘಟಿತ ಪ್ರದರ್ಶನ ನೀಡಿದ ಕರ್ನಾಟಕ ತಂಡ ಮಿರೆರಾಂ ವಿರುದ್ಧ ಸೋಮವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಟಗಾರ ರೋಹನ್ ಕದಮ್(78) ಹಾಗೂ ಮಧ್ಯಮ ಕ್ರಮಾಂಕದ ಕರುಣ್ ನಾಯರ್(71)ಅರ್ಧಶತಕಗಳ ಕೊಡುಗೆ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 242 ರನ್ ಕಲೆಹಾಕಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಮಿರೆರಾಂ ಉತ್ತಮ ಆರಂಭ ಪಡೆದಿದ್ದರೂ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ 8 ರನ್ ನೀಡಿ 4 ವಿಕೆಟ್ ಉರುಳಿಸಿದ ಸ್ಪಿನ್ನರ್ ಎಸ್.ಗೋಪಾಲ್ ಮತ್ತೊಮ್ಮೆ ಮಿಂಚಿದರು. ಸತತ ನಾಲ್ಕನೇ ಗೆಲುವು ದಾಖಲಿಸಿದ ಮನೀಷ್ ಪಾಂಡೆ ಬಳಗ ಟೂರ್ನಿಯ ‘ಡಿ’ ಗುಂಪಿನಲ್ಲಿ ಒಟ್ಟು 16 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ತಲಾ 12 ಅಂಕ ಗಳಿಸಿರುವ ಅಸ್ಸಾಂ ಹಾಗೂ ಛತ್ತೀಸ್‌ಗಢ ಎರಡು ಹಾಗೂ 3ನೇ ಸ್ಥಾನದಲ್ಲಿವೆ.

ಕರ್ನಾಟಕದ ಪರ ಇನಿಂಗ್ಸ್ ಆರಂಭಿಸಿದ ಧಾರವಾಡದ ದಾಂಡಿಗ ರೋಹನ್ ಹಾಗೂ ಮಾಯಾಂಕ್ ಅಗರ್ವಾಲ್(20) ಮೊದಲ ವಿಕೆಟ್‌ಗೆ 52 ರನ್ ಸೇರಿಸಿದರು. ಅಗರ್ವಾಲ್ 20 ರನ್ ಗಳಿಸಿ ಖಾದಿರ್‌ಗೆ ರಿಟರ್ನ್ ಕ್ಯಾಚ್ ನೀಡಿದರು.

ಆಗ ಜೊತೆಯಾದ ರೋಹನ್(78,51 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಕರುಣ್ ನಾಯರ್(71,33 ಎಸೆತ, 5 ಬೌಂಡರಿ, 5 ಸಿಕ್ಸರ್)2ನೇ ವಿಕೆಟ್‌ಗೆ 128 ರನ್ ಜೊತೆಯಾಟ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಔಟಾಗದೆ 33 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್)ಗಳಿಸಿದ ನಾಯಕ ಪಾಂಡೆ ಹಾಗೂ ಆಲ್‌ರೌಂಡರ್ ಸುಚಿತ್(ಔಟಾಗದೆ 26)ತಂಡದ ಮೊತ್ತವನ್ನು 242ಕ್ಕೆ ತಲುಪಿಸಿದರು.

ಗೆಲ್ಲಲು ಸವಾಲಿನ ಮೊತ್ತ ಪಡೆದ ಮಿರೆರಾಂ ಪರ ನಾಯಕ ತರುವರ್ ಕೊಹ್ಲಿ(36) ಹಾಗೂ ರಾಜ್‌ಪೂತ್(41) ಮೊದಲ ವಿಕೆಟ್‌ಗೆ 63 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ಈ ಇಬ್ಬರು ಆಟಗಾರರು ಬೇರ್ಪಟ್ಟ ಬಳಿಕ ಮಿರೆರಾಂ ಬ್ಯಾಟಿಂಗ್ ಕುಸಿತಕ್ಕೆ ಒಳಗಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News