ಜಯಸೂರ್ಯಗೆ ಎರಡು ವರ್ಷ ನಿಷೇಧ ವಿಧಿಸಿದ ಐಸಿಸಿ
ಕೊಲಂಬೊ, ಫೆ.26: ಮಾಜಿ ನಾಯಕ, ವಿಶ್ವಕಪ್ ವಿಜೇತ ಆಟಗಾರ ಹಾಗೂ ಶ್ರೀಲಂಕಾದ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿರುವ ಸನತ್ ಜಯಸೂರ್ಯಗೆ ದೇಶದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸಹಕಾರ ನೀಡಲು ನಿರಾಕರಿಸಿದರೆಂಬ ಕಾರಣಕ್ಕೆ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.
ಐಸಿಸಿ ನಿಷೇಧ ತಕ್ಷಣವೇ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಜಯಸೂರ್ಯ 2021ರ ತನಕ ಕ್ರಿಕೆಟ್ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜಯಸೂರ್ಯ ಅವರು ಎರಡು ಬಾರಿ ಐಸಿಸಿ ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು, ತನಿಖೆಯ ವೇಳೆ ಬಳಸುತ್ತಿದ್ದ ಮೊಬೈಲ್ ಫೋನ್‌ನ್ನು ಹಸ್ತಾಂತರಿಸಲು ಜಯಸೂರ್ಯ ನಿರಾಕರಿಸಿದ್ದರು ಎಂದು ಎಸಿಯು ಆರೋಪಿಸಿತ್ತು.
ಎಸಿಯು ತನ್ನ ಮೇಲೆ ಆರೋಪ ಹೊರಿಸಿದ ಮರುದಿನವೇ ಸಾರ್ವಜನಿಕ ಹೇಳಿಕೆ ನೀಡಿದ್ದ ಜಯಸೂರ್ಯ, "ನಾನು ಸ್ವತಃ ಯಾವಾಗಲೂ ಪಾರದರ್ಶಕತೆ ಹಾಗೂ ಸಮಗ್ರತೆಯನ್ನು ಕಾಯ್ದುಕೊಂಡಿರುವೆ. ಮ್ಯಾಚ್ ಫಿಕ್ಸಿಂಗ್,ಪಿಚ್ ಫಿಕ್ಸಿಂಗ್ ಸಹಿತ ಯಾವುದೇ ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ನಾನು ಭಾಗಿಯಾಗಿಲ್ಲ'' ಎಂದು ಹೇಳಿದ್ದರು.