×
Ad

ಮ್ಯಾಕ್ರನ್ ಕಪ್ ಬಾಕ್ಸಿಂಗ್: ಆರು ಭಾರತೀಯ ಸ್ಪರ್ಧಿಗಳು ಫೈನಲ್‌ಗೆ

Update: 2019-02-26 23:37 IST

ಹೊಸದಿಲ್ಲಿ, ಫೆ.26: ಕಾಮನ್‌ವೆಲ್ತ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ಜೋಡಿ ಮನೀಷ್ ಕೌಶಿಕ್ (60 ಕೆ.ಜಿ.)ಹಾಗೂ ಸತೀಶ್ ಕುಮಾರ್ (+91 ಕೆ.ಜಿ.) ಹಾಗೂ ನಾಲ್ವರು ಭಾರತೀಯ ಬಾಕ್ಸರ್‌ಗಳು ಇರಾನ್ ಚಬಹಾರ್‌ನಲ್ಲಿ ನಡೆಯುತ್ತಿರುವ ಮ್ಯಾಕ್ರನ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.

ಸೋಮವಾರ ಸಂಜೆ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಇತರ ಬಾಕ್ಸರ್‌ಗಳಾದ ದೀಪಕ್ ಸಿಂಗ್(49 ಕೆ.ಜಿ.), ಪಿ.ಲಲಿತ್ ಪ್ರಸಾದ್(52 ಕೆ.ಜಿ.), ಸಂಜೀತ್(91 ಕೆ.ಜಿ.) ಹಾಗೂ ಮಂಜೀತ್ ಸಿಂಗ್ ಪಾಂಘಾಲ್ (75 ಕೆ.ಜಿ.) ಅಂತಿಮ ಸುತ್ತಿಗೆ ಪ್ರವೇಶ ಪಡೆದರು.

ರಾಷ್ಟ್ರೀಯ ಚಾಂಪಿಯನ್ ಕೌಶಿಕ್ ಸೆಮಿಫೈನಲ್‌ನಲ್ಲಿ ಆಶ್‌ಕಾನ್ ರೆಯ್‌ಝೈ ಅವರನ್ನು 4-1 ಅಂಕಗಳಿಂದ ಮಣಿಸಿದ್ದಾರೆ. ಬುಧವಾರ ನಡೆಯುವ ಫೈನಲ್ ಪಂದ್ಯದಲ್ಲಿ ಅವರು ದಾನಿಯಲ್ ಬಕ್ಷ್ ಶಾ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದೆಡೆ ಸತೀಶ್ ಕುಮಾರ್ ಎಮನ್ ರಮಝಾನ್ ಅವರನ್ನು 5-0 ಅಂಕಗಳಿಂದ ಮಣಿಸಿ ಫೈನಲ್‌ನಲ್ಲಿ ಮುಹಮ್ಮದ್ ಮ್ಲೈಸ್ ಅವರನ್ನು ಎದುರುಗೊಳ್ಳುವರು. ದೀಪಕ್ ಅವರು ಮಲೆಕ್ ಅಮ್ಮಾರಿಗೆ 5-0ಯಿಂದ ಸೋಲುಣಿಸಿದ್ದು, ಫೈನಲ್‌ನಲ್ಲಿ ಜಾಫರ್ ನಾಸರಿ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

ಪ್ರಸಾದ್ ಅವರು ಫಿಲಿಪಿನೊ ಮರ್ವಿನ್ ಅವರನ್ನು ಮಣಿಸಿ ಅಂತಿಮ ಪಂದ್ಯದಲ್ಲಿ ಒಮಿದ್ ಸಫಾ ಅಹ್ಮದಿ ಅವರನ್ನು ಎದುರಿಸಲಿದ್ದಾರೆ.

ಕಳೆದ ವರ್ಷದ ಇಂಡಿಯನ್ ಓಪನ್ ಚಿನ್ನ ವಿಜೇತ ಸಂಜೀತ್ ಅವರಯ ಪೌರ್ಯ ಅಮಿರಿ ಅವರನ್ನು ಮಣಿಸಿದ್ದು, ಫೈನಲ್ ಪಂದ್ಯದಲ್ಲಿ ಎಹಸಾನ್ ಬಹಾನಿ ರೌಝ್ ಅವರೊಂದಿಗೆ ಸೆಣಸಲಿದ್ದಾರೆ.

ಚೊಚ್ಚಲ ಟೂರ್ನಿ ಆಡುತ್ತಿರುವ ಮಂಜೀತ್ ಅವರು ಸಿನಾ ಸಫ್ದರಿಯನ್ ಅವರನ್ನು ಸೆಮಿಫೈನಲ್‌ನಲ್ಲಿ ಮಣಿಸಿದ್ದು, ಅಂತಿಮ ಪಂದ್ಯದಲ್ಲಿ ಸಿರಿಯಾದ ಅಹ್ಮದ್ ಗೌಸೌನ್ ಅವರನ್ನು ಎದುರಿಸಲಿದ್ದಾರೆ.

ಇಬ್ಬರು ಭಾರತೀಯರಿಗೆ ಸೋಲು: ಸೆಮಿಫೈನಲ್‌ಗೆ ತಲುಪಿದ್ದ ಇಬ್ಬರು ಭಾರತೀಯರು ಸೋಲು ಅನುಭವಿಸಿದ್ದಾರೆ. ರೋಹಿತ್ ಟೋಕಾಸ್ (64 ಕೆ.ಜಿ.) ಹಾಗೂ ದುರ್ಯೋಧನ ಸಿಂಗ್ ನೇಗಿ (69 ಕೆ.ಜಿ) ಕ್ರಮವಾಗಿ ಬಾಘರ್ ಫರಾಜಿ ಹಾಗೂ ಅಲಿ ಮೊರಾದಿ ವಿರುದ್ಧ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News