×
Ad

ಕುಸ್ತಿ ತೊರೆದ ರಿತು ಪೋಗಟ್ ಮಿಶ್ರ ಮಾರ್ಷಲ್ ಆರ್ಟ್ಸ್ ಗೆ

Update: 2019-02-26 23:42 IST

ಚಂಡಿಗಡ, ಫೆ.26: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ‘ದಂಗಲ್’ ಸಿನೆಮಾದಿಂದ ಜನಪ್ರಿಯರಾಗಿರುವ ಕುಸ್ತಿ ಕೋಚ್ ಮಹಾವೀರ್ ಪೋಗಟ್ ಅವರ ಮಗಳು ರಿತು ಪೋಗಟ್ ಕುಸ್ತಿಯನ್ನು ತೊರೆಯಲು ನಿರ್ಧರಿಸಿದ್ದಾರೆ. ಕುಸ್ತಿ ಬದಲಾಗಿ ಮಿಶ್ರ ಮಾರ್ಷಲ್ ಆರ್ಟ್ಸ್(ಎಮ್‌ಎಮ್‌ಎ) ಸೇರುವುದಾಗಿ ಸೋಮವಾರ ಘೋಷಿಸಿದ್ದಾರೆ.

ಪ್ರಸಿದ್ಧ ಪೋಗಟ್ ಸಹೋದರಿಯರಾದ ಗೀತಾ, ಬಬಿತಾ, ರಿತು ಹಾಗೂ ಸಂಗೀತಾ ಅವರಲ್ಲಿ 24 ವರ್ಷ ವಯಸ್ಸಿನ ರಿತು ಮೂರನೆಯವರಾಗಿದ್ದಾರೆ. 2017ರಲ್ಲಿ ಪೋಲೆಂಡ್‌ನಲ್ಲಿ ನಡೆದ ವಿಶ್ವ ಅಂಡರ್-23 ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನ 48 ಕೆ.ಜಿ. ವಿಭಾಗದಲ್ಲಿ ಅವರು ಬೆಳ್ಳಿ ಪದಕ ಪಡೆದಿದ್ದರು.

ಅವರು ಈಗಾಗಲೇ ಸಿಂಗಾಪುರ ಮೂಲದ ಇವಾಲ್ವ್ ಫೈಟ್ ಟೀಮ್ ಎಂಬ ಎಂ.ಎಂ.ಎ ತಂಡವನ್ನು ಸೇರಿಕೊಂಡಿದ್ದಾರೆ. ಈ ಕುರಿತು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿರುವ ರಿತು ‘‘ ನನ್ನ ಹೊಸ ಪಯಣ ಆರಂಭಿಸಲು ಉತ್ಸುಕಳಾಗಿದ್ದೇನೆ. ಎಂ.ಎಂ.ಎಗೆ ಮೊದಲ ಭಾರತೀಯ ವಿಶ್ವ ಚಾಂಪಿಯನ್ ಆಗಬೇಕೆಂಬ ಕಾರಣಕ್ಕೆ ಈ ಕ್ರೀಡೆಯನ್ನು ಆಯ್ದುಕೊಂಡಿದ್ದೇನೆ’’ ಎಂದಿದ್ದಾರೆ.

ಈ ಕುರಿತು ಆಘಾತ ವ್ಯಕ್ತಪಡಿಸಿರುವ ಭಾರತ ಕುಸ್ತಿ ಒಕ್ಕೂಟ ‘‘ತಾನು ಗಾಯಾಳುವಾಗಿದ್ದೇನೆ ಎಂದು ಹೇಳುವ ಮೂಲಕ ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದರು’’ ಎಂದು ಪ್ರತಿಕ್ರಿಯಿಸಿದೆ.

ಎಂ.ಎಂ.ಎ. ಆಯ್ದುಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ರಿತು ‘‘ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರು ಕುಸ್ತಿಪಟುಗಳು. ನಾನು ಗೀತಾ ಹಾಗೂ ಬಬಿತಾ ಅವರ ಸಹೋದರಿ ಆಗಿರುವುದರಿಂದ ಜನ ನಿರೀಕ್ಷೆಯಿಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಗಳು ಹಾಗೂ ಭರವಸೆಗಳನ್ನು ಈಡೇರಿಸಲು ಬಯಸುತ್ತೇನೆ. ಆದರೆ ಕುಸ್ತಿಯ ಮ್ಯಾಟ್ ಮೇಲೆ ಅಲ್ಲ; ಬದಲಾಗಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್‌ನಲ್ಲಿ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News