×
Ad

ಫೈನಲ್‌ಗೆ ಅರ್ಹತೆ ಗಳಿಸಲು ಮನು, ಹೀನಾ ವಿಫಲ

Update: 2019-02-26 23:44 IST

ಹೊಸದಿಲ್ಲಿ, ಫೆ.26: ಖ್ಯಾತ ಶೂಟರ್‌ಗಳಾದ ಮನು ಭಾಕರ್ ಹಾಗೂ ಹೀನಾ ಸಿಧು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಫೈನಲ್‌ಗೆ ಅರ್ಹತೆ ಪಡೆಯಲು ಮಂಗಳವಾರ ವಿಫಲರಾಗಿ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.

ಇಲ್ಲಿಯ ಡಾ. ಕರ್ಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ 50 ಮೀ. ರೈಫಲ್ 3 ಪೊಸಿಶನ್‌ನಲ್ಲೂ ಭಾರತ ನಿರಾಸೆ ಅನುಭವಿಸಿತು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಗಾಯತ್ರಿ ನಿತ್ಯನಾದಮ್ ಹಾಗೂ ಸುನಿಧಿ ಚೌಹಾಣ್‌ರಿಗೂ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

10 ಮೀ. ಏರ್ ಪಿಸ್ತೂಲ್‌ನ ಅರ್ಹತಾ ಸುತ್ತಿನಲ್ಲಿ 573 ಅಂಕಗಳೊಂದಿಗೆ 14ನೇ ಸ್ಥಾನ ಪಡೆದ ಮನು ಭಾರೀ ನಿರಾಸೆ ಮೂಡಿಸಿದರು. ಅನುಭವಿ ಹೀನಾ ಕೂಡ ಅದೇ ರೀತಿಯ ಪ್ರದರ್ಶನ ನೀಡಿದ್ದು, 571 ಅಂಕಗಳೊಂದಿಗೆ 25ನೇ ಸ್ಥಾನ ಗಳಿಸಿದರು.

ಈ ವಿಭಾಗದಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಭಾರತ ವಾಯುಸೇನೆಯ ಉದ್ಯೋಗಿ ಅನುರಾಧಾ 22ನೇ ಸ್ಥಾನ ಪಡೆದರು.

ವೆರೊನಿಕಾಗೆ ಚಿನ್ನ: 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಹಂಗರಿಯ ವೆರೊನಿಕಾ ಮೇಜರ್ (245.1) ಚಿನ್ನದ ಪದಕ ಮುಡಿಗೇರಿಸಿಕೊಂಡರೆ ತೈಪೆನ ಚಿಯಾ ಯಿಂಗ್ ವು (238.4) ಬೆಳ್ಳಿ ಹಾಗೂ ಕೊರಿಯದ ಬೋಮಿ ಕಿಮ್(218.3) ಕಂಚಿಗೆ ತೃಪ್ತಿ ಪಟ್ಟರು.

ಮಹಿಳೆಯರ 50 ಮೀ. ರೈಫಲ್ ಪೊಸಿಶನ್‌ನಲ್ಲಿ ಸ್ವಿಟ್ಝ್‌ರ್ಲೆಂಡ್‌ನ ನಿನಾ ಕ್ರಿಸ್ಟೆನ್(457.1) ಚಿನ್ನ ಗೆದ್ದರೆ ಚೀನಾದ ಮೆಂಗಾಯೊ ಬೆಳ್ಳಿ ಹಾಗೂ ಕಝಕ್‌ಸ್ತಾನ್‌ನ ಯೆಲಿಝವೆಟಾ ಕೊರೊಲ್ ಕಂಚು ಪಡೆದರು.

ಅನೀಶ್ ಭನ್ವಾಲಾಗೆ 5ನೇ ಸ್ಥಾನ

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಅನೀಶ್ ಭನ್ವಾಲಾ ಮಾತ್ರ ಮಂಗಳವಾರ ಪದಕದ ಸಮೀಪಕ್ಕೆ ಸುಳಿದ ಭಾರತದ ಆಟಗಾರ ಎನಿಸಿದರು. 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಅವರು 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ರಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಜರ್ಮನಿಯ ಕ್ರಿಸ್ಟಿಯನ್ ರಿಟ್ಝ್ ಪ್ರಥಮ ಸ್ಥಾನ ಪಡೆದರು. 2018ರ ವಿಶ್ವ ಚಾಂಪಿಯನ್ ಚೀನಾದ ಜುನ್ಮಿನ್ ಲಿನ್ ಬೆಳ್ಳಿ ಪದಕ ಹಾಗೂ 2014ರ ವಿಶ್ವ ಚಾಂಪಿಯನ್ ಕೊರಿಯದ ಜುನ್‌ಹಾಂಗ್ ಕಿಮ್ ಕಂಚಿನ ಪದಕ ಬಾಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News