×
Ad

ಸಮಸ್ಯೆ ಪರಿಹಾರದ ಭರವಸೆ ನೀಡಿದ ಐಸಿಸಿ

Update: 2019-02-27 23:35 IST

ದುಬೈ, ಫೆ.27: ಪುಲ್ವಾಮದಲ್ಲಿ ಉಗ್ರನ ಆತ್ಮಾಹುತಿ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತ ಭದ್ರತೆಯ ಬಗ್ಗೆ ಬುಧವಾರ ಆತಂಕ ವ್ಯಕ್ತಪಡಿಸಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸಂಪೂರ್ಣ ಸುರಕ್ಷತೆ ಒದಗಿಸುವ ಭರವಸೆ ನೀಡಿದೆ.

ಐಸಿಸಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಸಮಿತಿ(ಸಿಇಸಿ)ಸಭೆಯ ಆರಂಭದಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಮೆಗಾ ಸ್ಪರ್ಧೆಗೆ ಭಾರತದ ಆಟಗಾರರು ಭದ್ರತೆಯ ಭಯ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ‘‘ಬಿಸಿಸಿಐ ಪರವಾಗಿ ರಾಹುಲ್ ಜೊಹ್ರಿ ಭಾರತೀಯ ಕ್ರಿಕೆಟ್ ತಂಡ, ಪಂದ್ಯದ ಅಧಿಕಾರಿಗಳು ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ’’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಸಿ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂಯೋಜಿಸಿರುವ ಭದ್ರತೆಯ ಯೋಜನೆಯ ಬಗ್ಗೆ ಬಿಸಿಸಿಐ ನಂಬಿಕೆ ಇಟ್ಟುಕೊಂಡಿದೆ ಎಂದು ಜೊಹ್ರಿ ಸಭೆಯಲ್ಲಿ ತಿಳಿಸಿದ್ದಾರೆ. ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಬಿಸಿಸಿಐಗೆ ಸಕಲ ರೀತಿಯ ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತೆಯ ಕುರಿತ ಚರ್ಚೆ ಸಿಇಸಿ ಸಭೆಯ ಮೂಲ ಕಾರ್ಯಸೂಚಿಯಲ್ಲಿರಲಿಲ್ಲ. ಆದರೆ, ಬಿಸಿಸಿಐ ಒತ್ತಾಯದ ಮೇರೆಗೆ ವಿಷಯ ಪ್ರಸ್ತಾವಕ್ಕೆ ಐಸಿಸಿ ಅವಕಾಶ ನೀಡಿತ್ತು. ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಕಾರಣ ಜೂ.16 ರಂದು ಇಂಗ್ಲೆಂಡ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯುವ ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ನ ಗ್ರೂಪ್ ಪಂದ್ಯವನ್ನು ಬಿಸಿಸಿಐ ಬಹಿಷ್ಕರಿಸಬೇಕೆಂದು ಹರ್ಭಜನ್ ಸಿಂಗ್ ಹಾಗೂ ಸೌರವ್ ಗಂಗುಲಿ ಅವರಂತಹ ಭಾರತದ ಖ್ಯಾತ ಕ್ರಿಕೆಟಿಗರು ಒತ್ತಾಯಿಸಿದ್ದಾರೆ.

ಭಾರತ-ಪಾಕ್ ತಂಡಗಳು ಟೂರ್ನಿಯ ನಾಕೌಟ್ ಹಂತದಲ್ಲೂ ಮುಖಾಮುಖಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಬಿಸಿಸಿಐ ಪಂದ್ಯವನ್ನು ಬಹಿಷ್ಕರಿಸುವ ನಿಲುವಿಗೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News