ನಡಾಲ್, ಅಲೆಕ್ಸಾಂಡರ್ ಝ್ವೆರೆವ್‌ಗೆ ಗೆಲುವು
ಅಕಾಪಲ್ಕೊ (ಮೆಕ್ಸಿಕೊ), ಫೆ.27: ಸ್ಪೇನ್‌ನ ತಾರಾ ಆಟಗಾರ ಅಗ್ರ ಶ್ರೇಯಾಂಕದ ರಫೆಲ್ ನಡಾಲ್ ರಶ್ಯದ ಮಿಸ್ಚಾ ಝ್ವೆರೆವ್‌ರನ್ನು 6-3, 6-3 ಸೆಟ್‌ಗಳಿಂದ ಮಣಿಸುವ ಮೂಲಕ ಅಕಾಪಲ್ಕೊ ಅಂತರ್‌ರಾಷ್ಟ್ರೀಯ ಟೆನಿಸ್ ಟೂರ್ನಿಯ ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ.
ಈ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಅಗ್ರ ರ್ಯಾಂಕಿನ ಆಟಗಾರ ನೊವಾಕ್ ಜೊಕೊವಿಕ್‌ಗೆ ಸೋತ ಬಳಿಕ ಮೊದಲ ಬಾರಿ ಅಂಗಣದಲ್ಲಿ ಕಾಣಿಸಿಕೊಂಡಿದ್ದಾರೆ ನಡಾಲ್. ಈ ಟೂರ್ನಿಯ ಕಳೆದ ಮೂರು ಆವೃತ್ತಿಗಳಲ್ಲಿ ಫೈನಲ್‌ಗೆ ತಲುಪಿರುವ ನಡಾಲ್ 16 ಪಂದ್ಯಗಳನ್ನು ಆಡಿ ಕೇವಲ 1ರಲ್ಲಿ ಮಾತ್ರ ಸೋಲು ಕಂಡಿದ್ದಾರೆ.
ವಿಶ್ವ ನಂ.2 ಆಟಗಾರನಾಗಿರುವ ನಡಾಲ್ ತಮ್ಮ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಅವರ ಸವಾಲಿಗೆ ಸಜ್ಜಾಗಲಿದ್ದಾರೆ. ಇನ್ನೊಂದೆಡೆ ಕಿರ್ಗಿಯೊಸ್ ಅವರು ಇಟಲಿಯ ಆ್ಯಂಡ್ರೆಸ್ ಸೆಪ್ಪಿ ಅವರನ್ನು 6-3, 7-5 ಸೆಟ್‌ಗಳಿಂದ ಸೋಲಿಸಿದ್ದಾರೆ.
ಮತ್ತೊಂದೆಡೆ ಯುವ ಆಟಗಾರ ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಅವರು ಅಲೆಕ್ಸಿ ಪಾಪಿರಿನ್ ಅವರನ್ನು 6-3, 6-3 ಸೆಟ್‌ಗಳಿಂದ ಮಣಿಸಿದರು. ಮೂರನೇ ಶ್ರೇಯಾಂಕದ ಜಾನ್ ಇಸ್ನೆರ್ 6-3, 4-6, 6-3ರಿಂದ ಫ್ರಾನ್ಸ್‌ನ ಆಡ್ರಿಯಾನ್ ಮನ್ನಾರಿನೊ ಅವರನ್ನು ಮಣಿಸಿದರು.