ಭಾರತ ಪ್ರವಾಸದಿಂದ ಕೇನ್ ರಿಚರ್ಡ್‌ಸನ್ ಹೊರಕ್ಕೆ
Update: 2019-02-27 23:43 IST
ಮುಂಬೈ, ಫೆ.27: ಗಾಯದ ಕಾರಣದಿಂದ ಆಸ್ಟ್ರೇಲಿಯ ವೇಗಿ ಕೇನ್ ರಿಚರ್ಡ್ಸನ್ ಭಾರತ ಪ್ರವಾಸದಿಂದ ಹೊರಗುಳಿದಿದ್ದಾರೆ ಎಂದು ಬುಧವಾರ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ತಿಳಿಸಿದೆ.
28 ವರ್ಷದ ಕೇನ್ ಅವರಿಗೆ ಪ್ರಥಮ ಟಿ20 ಪಂದ್ಯಕ್ಕೂ ಮೊದಲು ನಡೆದ ಅಭ್ಯಾಸದಲ್ಲಿ ದೇಹದ ಎಡಭಾಗದಲ್ಲಿ ಗಾಯವಾಗಿದ್ದು, ಅವರ ಸ್ಥಾನಕ್ಕೆ ಆ್ಯಂಡ್ರೂ ಟೈ ಅವರನ್ನು ಕರೆತರಲಾಗಿದೆ.
ಗಾಯದ ಕಾರಣ ಕೇನ್ ಆಸ್ಟ್ರೇಲಿಯಕ್ಕೆ ತೆರಳಲಿದ್ದು ಅಲ್ಲಿಯೇ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಆಸೀಸ್ ತಂಡದ ಫಿಸಿಯೊ ಡೇವಿಡ್ ಬೀಕ್ಲಿ ತಿಳಿಸಿದ್ದಾರೆ.
ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯ ತಂಡದ ನಿಗದಿತ ಓವರ್‌ಗಳ ಟೂರ್ನಿಗೆ ಈಗಾಗಲೇ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್‌ವುಡ್ ಅಲಭ್ಯರಾಗಿದ್ದು ಇದು ಆ ತಂಡಕ್ಕಾದ ಮತ್ತೊಂದು ಹೊಡೆತವಾಗಿದೆ. ಆಸೀಸ್ ಮೊದಲ ಟಿ20 ಪಂದ್ಯವನ್ನು ಈಗಾಗಲೇ 3 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.