×
Ad

ಕರ್ನಾಟಕಕ್ಕೆ ಸುಲಭ ತುತ್ತಾದ ಒಡಿಶಾ

Update: 2019-02-28 23:38 IST

ಕಟಕ್,ಫೆ.28: ಧಾರವಾಡದ ದಾಂಡಿಗ ರೋಹನ್ ಕದಮ್(89, 59 ಎಸೆತ, 10 ಬೌಂಡರಿ, 2 ಸಿಕ್ಸರ್)ಭರ್ಜರಿ ಶತಕಾರ್ಧ,ಕೆ.ಸಿ. ಕಾರಿಯಪ್ಪ(4-15), ವಿ.ಕೌಶಿಕ್(3-8) ಹಾಗೂ ಸುಚಿತ್(2-27)ಸಂಘಟಿತ ದಾಳಿಯ ಸಹಾಯದಿಂದ ಕರ್ನಾಟಕ ತಂಡ ಒಡಿಶಾ ವಿರುದ್ಧ ಗುರುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದೆ.

ಗೆಲ್ಲಲು 156 ರನ್ ಗುರಿ ಪಡೆದಿದ್ದ ಒಡಿಶಾ, ಕಾರಿಯಪ್ಪ ನೇತೃತ್ವದ ಕರ್ನಾಟಕದ ಶಿಸ್ತುಬದ್ಧ ಬೌಲಿಂಗ್‌ಗೆ ಕಂಗಾಲಾಗಿ 18.1 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು. 51 ರನ್‌ಗಳಿಂದ ಸೋಲುಂಡಿತು.

ಈ ಗೆಲುವಿನೊಂದಿಗೆ ಕರ್ನಾಟಕ ಟೂರ್ನಿಯಲ್ಲಿ ಸತತ 6ನೇ ಗೆಲುವು ದಾಖಲಿಸಿ ಅಜೇಯ ಗೆಲುವಿನ ಓಟ ಮುಂದುವರಿಸಿದೆ. ಮನೀಷ್ ಪಾಂಡೆ ಬಳಗ 6 ಪಂದ್ಯಗಳಲ್ಲಿ 24 ಅಂಕ ಗಳಿಸಿ ‘ಡಿ ’ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಭದ್ರಪಡಿಸಿಕೊಂಡಿದೆ. ಒಡಿಶಾದ ಪರ ಕೆಳ ಕ್ರಮಾಂಕದಲ್ಲಿ ಎಸ್‌ಬಿ ಪ್ರಧಾನ್(32)ಗರಿಷ್ಠ ಸ್ಕೋರ್ ಗಳಿಸಿದರು. ಪ್ರಯಾಶ್ ಸಿಂಗ್(12), ನಾಯಕ ಸಾರಂಗಿ(12) ಹಾಗೂ ಡಿಬಿ ಪ್ರಧಾನ್(13) ಎರಡಂಕೆಯ ಸ್ಕೋರ್ ಗಳಿಸಿದರು.

ಮೊದಲ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಆಟಗಾರ ಧೂಪರ್(0) ವಿಕೆಟನ್ನು ಕಳೆದುಕೊಂಡ ಒಡಿಶಾ ಯಾವ ಹಂತದಲ್ಲೂ ಹೋರಾಟ ನೀಡದೇ ಸುಲಭವಾಗಿ ಶರಣಾಯಿತು. ಪ್ರಧಾನ್ ಹಾಗೂ ಪ್ರಯಾಶ್ ಸಿಂಗ್ ತಂಡ 44 ರನ್‌ಗೆ 6 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ 7ನೇ ವಿಕೆಟ್‌ಗೆ 44 ರನ್ ಜೊತೆಯಾಟ ನಡೆಸಿದ್ದು ಬಿಟ್ಟರೆ ಎಲ್ಲಿಯೂ ಕೂಡ ಒಡಿಶಾ ಪ್ರತಿರೋಧ ಒಡ್ಡಲಿಲ್ಲ.

ಕರ್ನಾಟಕ 155/9: 

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 155 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ರೋಹನ್ ಹೊರತುಪಡಿಸಿ ಬೇರ್ಯಾವ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಗೋಜಿಗೆ ಹೋಗಲಿಲ್ಲ. ‘ಒನ್ ಮ್ಯಾನ್ ಶೋ ’ ಪ್ರದರ್ಶಿಸಿದ ರೋಹನ್ ಏಕಾಂಗಿಯಾಗಿ ಕರ್ನಾಟಕ ಉತ್ತಮ ಮೊತ್ತ ಗಳಿಸಲು ನೆರವಾದರು. ಕರ್ನಾಟಕದ ಪರ ಎಸ್.ಗೋಪಾಲ್(17), ಮಾಯಾಂಕ್ ಅಗರ್ವಾಲ್(10), ಕರುಣ್ ನಾಯರ್(10)ಎರಡಂಕೆಯ ಸ್ಕೋರ್ ಗಳಿಸಿದರು ನಾಯಕ ಮನೀಷ್ ಪಾಂಡೆ(8), ಶರತ್(1), ಸುಚಿತ್(0), ವಿನಯಕುಮಾರ್(6) ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ಒಡಿಶಾ ಪರ ಸಮಂಟ್ರೆ(2-10) ಹಾಗೂ ಪಪ್ಪು ರಾಯ್(2-21)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News