ಬಾರ್ಸಿಲೋನ ಕೋಪಾ ಡೆಲ್ ರೆ ಫೈನಲ್‌ಗೆ
Update: 2019-02-28 23:49 IST
ಮ್ಯಾಡ್ರಿಡ್, ಫೆ.28: ಉರುಗ್ವೆ ರಾಷ್ಟ್ರೀಯ ತಂಡದ ಆಟಗಾರ ಲೂಯಿಸ್ ಸುಯರೆಝ್ ಗಳಿಸಿದ ಅವಳಿ ಗೋಲುಗಳ ಬಲದಿಂದ ರಿಯಲ್ ಮ್ಯಾಡ್ರಿಡ್ ತಂಡವನ್ನು ಸೆಮಿಫೈನಲ್ ಪಂದ್ಯದಲ್ಲಿ 3-0ಯಿಂದ ಸದೆಬಡಿದ ಬಾರ್ಸಿಲೋನ ತಂಡ ಕೋಪಾ ಡೆಲ್ ರೆ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಹಾಲಿ ಚಾಂಪಿಯನ್ ಬಾರ್ಸಿಲೋನ ಆರನೇ ಬಾರಿ ಟೂರ್ನಿಯ ಫೈನಲ್ ತಲುಪಿದ ಸಾಧನೆ ಮಾಡಿದೆ.
ಸ್ಯಾಂಟಿಯಾಗೊ ಬೆರ್ನಬ್ಯು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬದ್ಧ ಎದುರಾಳಿ ರಿಯಲ್ ಮ್ಯಾಡ್ರಿಡ್ ಪ್ರಬಲ ಹೋರಾಟ ನಡೆಸಿದರೂ ಬಾರ್ಸಿಲೋನ ಎದುರು ಜಯ ಕಾಣಲಿಲ್ಲ. ಸುಯರೆಝ್ 50 ಹಾಗೂ 70ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ವೆರೆನ್ 69ನೇ ನಿಮಿಷದಲ್ಲಿ ಗೋಲು ಬಾರಿಸಿ ಬಾರ್ಸಿಲೋನ ತಂಡದ ಗೆಲುವಿಗೆ ಕಾರಣರಾದರು. ಫೈನಲ್ ಪಂದ್ಯವು ಮೇ 25ರಂದು ನಡೆಯಲಿದೆ. ಬಾರ್ಸಿಲೋನ ತಂಡ ರಿಯಲ್ ಬೇಟಿಸ್ ಅಥವಾ ವೆಲೆನ್ಸಿಯಾ ತಂಡವನ್ನು ಅಂತಿಮ ಪಂದ್ಯದಲ್ಲಿ ಎದುರಿಸಲಿದೆ.