ಭಾರತದಿಂದ ‘ಪರಿಸರ ಭಯೋತ್ಪಾದನೆ’ ಎಂದು ವಿಶ್ವಸಂಸ್ಥೆಗೆ ದೂರು ನೀಡಲು ಮುಂದಾದ ಪಾಕ್ !

Update: 2019-03-02 14:57 GMT

ಇಸ್ಲಾಮಾಬಾದ್, ಮಾ. 2: ಭಾರತವು ‘ಪರಿಸರ ಭಯೋತ್ಪಾದನೆ’ ನಡೆಸುತ್ತಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಗೆ ದೂರು ನೀಡಲು ಪಾಕಿಸ್ತಾನ ನಿರ್ಧರಿಸಿದೆ!

ಪಾಕಿಸ್ತಾನದ ಪಖ್ತೂಂಖ್ವ ರಾಜ್ಯದ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಪ್ರಧಾನ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಮಂಗಳವಾರ ಮುಂಜಾನೆ ನಡೆಸಿದ ದಾಳಿಗೆ ಸಂಬಂಧಿಸಿ ಅದು ದೂರು ನೀಡಲು ಮುಂದಾಗಿದೆ. ಈ ದಾಳಿಯಿಂದಾಗಿ ಪೈನ್ ಮರಗಳು ನಾಶವಾಗಿವೆ ಹಾಗೂ ನೆರೆಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕ ಹಾಗೂ ಇತರ ಪ್ರಭಾವಿ ದೇಶಗಳು ಈಗಾಗಲೇ ಮಧ್ಯಸ್ಥಿಕೆ ವಹಿಸಿವೆ.

ಭಾರತೀಯ ಯುದ್ಧ ವಿಮಾನಗಳು ಮಂಗಳವಾರ ಮುಂಜಾನೆ ಗಡಿ ನಿಯಂತ್ರಣ ರೇಖೆಯಿಂದ ಪಾಕಿಸ್ತಾನದ ಸುಮಾರು 70 ಕಿಲೋಮೀಟರ್ ಒಳಗಿನ ಬಾಲಕೋಟ್ ಪಟ್ಟಣದ ಸಮೀಪದ ಗುಡ್ಡಗಾಡು ಅರಣ್ಯ ಪ್ರದೇಶಕ್ಕೆ ಬಾಂಬ್‌ಗಳನ್ನು ಹಾಕಿವೆ ಎಂದು ಪಾಕಿಸ್ತಾನ ಆರೋಪಿಸಿದೆ.

ಭಾರತೀಯ ಯುದ್ಧ ವಿಮಾನಗಳು ‘ಮೀಸಲು ಅರಣ್ಯ’ದ ಮೇಲೆ ಬಾಂಬ್‌ಗಳನ್ನು ಹಾಕಿವೆ ಹಾಗೂ ಪರಿಸರದ ಮೇಲೆ ಅದು ಬೀರಿರುವ ಪರಿಣಾಮವನ್ನು ಸರಕಾರ ಅಂದಾಜಿಸುತ್ತಿದೆ ಎಂದು ಹವಾಮಾನ ಬದಲಾವಣೆ ಸಚಿವ ಮಲಿಕ್ ಅಮಿನ್ ಅಸ್ಲಮ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇದರ ಆಧಾರದಲ್ಲಿ ಪಾಕಿಸ್ತಾನವು ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳಲ್ಲಿ ದೂರು ಸಲ್ಲಿಸಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News