ಭಾರತದ ಸಶಸ್ತ್ರ ಪಡೆಗೆ ‘ಕೊಹ್ಲಿ ಪಡೆ’ ವಿಶೇಷ ಗೌರವ ಸಲ್ಲಿಸಿದ್ದು ಹೀಗೆ…

Update: 2019-03-08 13:48 GMT

ರಾಂಚಿ, ಮಾ.8: ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರಾಣ ಕಳೆದುಕೊಂಡಿರುವ ಸಿಆರ್‌ಪಿಎಫ್ ಯೋಧರಿಗೆ ಗೌರವ ಸಲ್ಲಿಕೆಯ ದ್ಯೋತಕವಾಗಿ ಭಾರತೀಯ ಕ್ರಿಕೆಟಿಗರು ಶುಕ್ರವಾರ ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿಶೇಷ ಮಿಲಿಟರಿ ಕ್ಯಾಪನ್ನು ಧರಿಸಿದರು. ಆಟಗಾರರು ಈ ಪಂದ್ಯದಲ್ಲಿ ಪಡೆಯುವ ಶುಲ್ಕವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಲಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಟಾಸ್ ಚಿಮ್ಮಿಸುವ ವೇಳೆಗೆ ಮಿಲಿಟರಿ ಕ್ಯಾಪ್ ಧರಿಸಿಕೊಂಡು ಮೈದಾನಕ್ಕೆ ಇಳಿದರು. ಈ ಕ್ಯಾಪ್‌ನಲ್ಲಿ ಬಿಸಿಸಿಐನ ಲಾಂಛನವಿದೆ. ಇದೊಂದು ಹುತಾತ್ಮ ಯೋಧರಿಗೆ ನೀಡಿದ ಗೌರವ ಎಂದು ಸ್ಪಷ್ಟಪಡಿಸಿರುವ ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಇದು ಪ್ರತಿ ವರ್ಷ ನಡೆಯಲಿದೆ ಎಂಬ ಮಾಧ್ಯಮ ವರದಿಯನ್ನು ನಿರಾಕರಿಸಿದರು.

ಪ್ರತಿಯೊಬ್ಬರೂ ರಾಷ್ಟ್ರೀಯ ರಕ್ಷಣಾ ನಿಧಿಗೆ ಕೊಡುಗೆ ನೀಡಬೇಕು ಎಂದು ವಿನಂತಿಸಿಕೊಂಡ ಕೊಹ್ಲಿ, ಈ ನಿಧಿ ಹುತಾತ್ಮ ಸಿಆರ್‌ಪಿಎಫ್ ಯೋಧರ ಕುಟುಂಬ ಸದಸ್ಯರ ಕಲ್ಯಾಣಕ್ಕೆ ವಿನಿಯೋಗವಾಗಲಿದೆ ಎಂದರು.

‘‘ಇದೊಂದು ವಿಶೇಷ ಟೋಪಿ. ಇದು ಸಶಸ್ತ್ರ ಪಡೆಗಳಿಗೆ ಸಲ್ಲಿಸುವ ಗೌರವವಾಗಿದೆ. ನಾವೆಲ್ಲರೂ 3ನೇ ಪಂದ್ಯದ ಶುಲ್ಕವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುತ್ತೇವೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಈ ಕೆಲಸಕ್ಕೆ ಕೈಜೋಡಿಸಬೇಕೆಂದು ಕೇಳಿಕೊಳ್ಳುತ್ತೇನೆ’’ ಎಂದು ಕೊಹ್ಲಿ ಹೇಳಿದ್ದಾರೆ.

ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ರ್ಯಾಂಕ್ ಪಡೆದಿರುವ ಮಾಜಿ ನಾಯಕ ಎಂ.ಎಸ್. ಧೋನಿ ಸೈನಿಕರಿಗೆ ಈ ರೀತಿಯ ಗೌರವ ನೀಡುವ ಯೋಚನೆ ಬಂದಿತ್ತು ಎಂದು ತಿಳಿದುಬಂದಿದೆ.

 ಧೋನಿ ಮಿಲಿಟರಿ ಕ್ಯಾಪ್‌ಗಳನ್ನು ತನ್ನ ಸಹ ಆಟಗಾರರಿಗೆ ಹಾಗೂ ಭಾರತೀಯ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ.

ಭಾರತದ ಆಡುವ 11ರ ಬಳಗದಲ್ಲಿರುವ ಸದಸ್ಯರು ಪ್ರತಿ ಏಕದಿನ ಪಂದ್ಯಕ್ಕೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಮೀಸಲು ಆಟಗಾರರು 4 ಲಕ್ಷ ರೂ. ಶುಲ್ಕ ಪಡೆಯುತ್ತಾರೆ. ಐಪಿಎಲ್ ಉದ್ಘಾಟನಾ ಸಮಾರಂಭದ ಇಡೀ ಆಯವ್ಯಯವನ್ನು ಉಗ್ರಗಾಮಿಗಳ ದಾಳಿಗೆ ತುತ್ತಾಗಿರುವ ಯೋಧರ ಕುಟುಂಬಕ್ಕೆ ದಾನ ನೀಡುವುದಾಗಿ ಬಿಸಿಸಿಐ ಈಗಾಗಲೇ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News