×
Ad

ಕಿಡಂಬಿ ಶ್ರೀಕಾಂತ್ ಮನೆಗೆ ಭಾರತದ ಸವಾಲು ಅಂತ್ಯ

Update: 2019-03-09 23:21 IST

ಬರ್ಮಿಂಗ್‌ಹ್ಯಾಮ್, ಮಾ.9: ಒಂದು ಮಿಲಿಯನ್ ಯುಎಸ್ ಡಾಲರ್ ಮೊತ್ತದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲು ಶುಕ್ರವಾರ ಅಂತ್ಯ ಕಂಡಿದೆ. ಭಾರತ ತಂಡದ ಕೊನೆಯ ಭರವಸೆಯಾಗಿ ಉಳಿದಿದ್ದ ಮಾಜಿ ವಿಶ್ವ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್, ಇಲ್ಲಿ ನಡೆದ ಪುರುಷರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹಾಲಿ ವಿಶ್ವ ನಂ.1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 12-21, 16-21 ಗೇಮ್‌ಗಳ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು. ಪ್ರಥಮ ಗೇಮ್‌ನಲ್ಲಿ 9-9 ಸಮಬಲದ ಪೈಪೋಟಿಯಿಂದ ಮೇಲೆದ್ದು ಬಂದ ಮೊಮೊಟಾ 10 ಗೇಮ್ ಪಾಯಿಂಟ್‌ಗಳನ್ನು ಗಳಿಸಿದರು. ಶ್ರೀಕಾಂತ್ ಈ ಗೇಮ್‌ನಲ್ಲಿ 2 ಗೇಮ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಅಂತಿಮವಾಗಿ ಗೇಮ್ ಜಪಾನ್ ಆಟಗಾರನ ಪಾಲಾಯಿತು.

ಎರಡನೇ ಗೇಮ್‌ನಲ್ಲೂ 3-3ರ ಸಮಬಲ ಕಂಡುಬಂದಿತ್ತು. ಆದರೆ ಬಿರುಸಿನ ಆಟವಾಡಿದ ಮೊಮೊಟಾ 11-4ರ ಮುನ್ನಡೆ ಪಡೆದು ಮುನ್ನುಗ್ಗಿದರು. ಪಂದ್ಯವನ್ನು ಎದುರಾಳಿಗೆ ಒಪ್ಪಿಸುವ ಮೊದಲು ಶ್ರೀಕಾಂತ್ ನಾಲ್ಕು ಮ್ಯಾಚ್ ಪಾಯಿಂಟ್ ಉಳಿಸಿಕೊಂಡರು.

ಈ ಮೊದಲು ಭಾರತದ ಭರವಸೆಯ ತಾರೆಯರಾಗಿದ್ದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಟೂರ್ನಿಯಲ್ಲಿ ಸೋತು ಹೊರನಡೆದಿದ್ದರು. ಸಿಂಧು ಪ್ರಥಮ ಸುತ್ತಿನಲ್ಲೇ ಮುಗ್ಗರಿಸಿದ್ದರೆ ಸೈನಾ ಕ್ವಾರ್ಟರ್‌ಫೈನಲ್‌ವರೆಗೂ ತಲುಪಿ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್‌ಗೆ ಮಣಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News